Bengaluru City
ಸಂಪುಟ ವಿಸ್ತರಣೆ – ಸಿಎಂ ಬಿಎಸ್ವೈಗೆ ಷರತ್ತುಬದ್ಧ ಅನುಮತಿ!

– ಸಿಎಂಗೆ ಶಾ ಮೂರು ಷರತ್ತು
ಬೆಂಗಳೂರು: ಸಂಕ್ರಾಂತಿ ಹಿಂದಿನ ದಿನವೇ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಸುಳಿವನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗಷ್ಟೇ ಷರತ್ತು ಬದ್ಧ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸಿಎಂ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಸಭೆ ನಡೆಸಿದ್ದರು. ಈ ವೇಳೆ ಹೈಕಮಾಂಡ್ ಯಡಿಯೂರಪ್ಪ ಅವರು ನಿಗಮ ಮಂಡಳಿಗಳಿಗೆ ನೇಮಕಾತಿಯಲ್ಲಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆಗೆ ಅಮಿತ್ ಮೂರು ಷರತ್ತು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ವೈಗೆ ಶಾ ಷರತ್ತು:
1. ಸದ್ಯಕ್ಕೆ ಸಂಪುಟ ವಿಸ್ತರಣೆಗಷ್ಟೇ ಅನುಮತಿ – ಹೊಸ ಸಚಿವರ ಸೇರ್ಪಡೆಯಷ್ಟೇ.
2. ಯಾರು ಸಚಿವರು ಆಗ್ಬೇಕು ಎಂಬ ಪಟ್ಟಿಯನ್ನ ನಾವೇ ಅಂತಿಮಗೊಳಿಸಿ ಕಳಿಸ್ತೀವಿ.
3. ಸಂಪುಟ ಪುನರ್ ರಚನೆ ನಿರ್ಧಾರವನ್ನ ಭವಿಷ್ಯದಲ್ಲೇ ನಾವೇ ಹೇಳ್ತೀವಿ.
ದೆಹಲಿಯಿಂದ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದಿನ ಭೇಟಿ ಸಂತಸ ತಂದಿದೆ. ಸಂಪುಟ ವಿಸ್ತರಣೆಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬರಬೇಕು ಎಂಬುವುದು ನಮ್ಮ ಆಸೆ. ಆರೇಳು ಜನರು ಸಂಪುಟ ಸೇರಲಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಮತ್ತು ಸಂಪುಟ ಸೇರುವವರ ಹೆಸರು ತಿಳಿಸಲಾಗುತ್ತೆ ಎಂದರು.
