Connect with us

Karnataka

ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಸಿಎಂ

Published

on

– ವಿಜಯೇಂದ್ರ ಎಂದು ಬಾಯಿ ಬಡ್ಕೊಳ್ತಿದ್ದಾರೆ, ಸಹಿಸಲಾಗುತ್ತಿಲ್ಲ

ರಾಯಚೂರು: ಮಸ್ಕಿ ಉಪಚುನಾವಣೆಯ ಭರ್ಜರಿ ಪ್ರಚಾರಗಳ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಶತಕ ಬಾರಿಸಿದ್ದು, ಜನರಲ್ಲಿ ಆತಂಕ ಮೂಡಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಎಚ್ಚರಿಸಿದರು.

ಈ ಕುರಿತು ಲಿಂಗಸುಗೂರಿನ ಮುದಗಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು 103 ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೆರಡು ದಿನಗಳಲ್ಲಿ ರಾಯಚೂರಿನಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಹೇರಲು ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಧಾನಿಯವರು ಎರಡು ಬಾರಿ ಫೋನ್ ಮಾಡಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.

ಕೊರೊನಾ ಹೆಚ್ಚು ಇರುವಲ್ಲಿ ನೈಟ್ ಕರ್ಫ್ಯೂ ಹಾಕಿದ್ದೇವೆ. ನಿಯಂತ್ರಣಕ್ಕೆ ಬಾರದಿದ್ದರೆ ಪ್ರಕರಣ ಹೆಚ್ಚು ಇರುವ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಹಾಕುತ್ತೇವೆ. ನಾಳೆ, ನಾಡಿದ್ದು ಪರಿಸ್ಥಿತಿ ನೋಡಿ ರಾಯಚೂರಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಶ್ನೆ ಇಲ್ಲ, ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಮಾಸ್ಕ್ ಹಾಕಬೇಕು, ಜಾಗೃತರಾಗಬೇಕು ಎಂದು ವಿನಂತಿಸುತ್ತೇನೆ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲ್ಲ. ಎಲ್ಲ ಕಡೆ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರ ಪ್ರವಾಸ ಇದ್ದರೂ ಕುರುಬ ಸಮಾಜದ ಹೆಚ್ಚು ಜನ ನಮ್ಮ ಸಭೆಯಲ್ಲಿ ಭಾಗವಹಿಸಿದ್ದರು. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಬಸವಕಲ್ಯಾಣ, ಬೆಳಗಾವಿಯಲ್ಲೂ ಗೆಲುವು ಸಾಧಿಸುತ್ತೇವೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ನವರಿಗೆ ನೀವು ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಅಂತ ಸವಾಲು ಹಾಕಿದ್ದೆ. ಮತ್ತೊಮ್ಮೆ ಹೇಳುತ್ತೇನೆ ಮೂರು ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ದಯನೀಯವಾದ ಸೋಲನ್ನ ನೀವು ಅನುಭವಿಸುತ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.

ವಿಜಯೇಂದ್ರ ಬಗ್ಗೆ ಸಿದ್ದರಾಮಯ್ಯ ಕುಂಟು ನೆಪ ಹೇಳುತ್ತಾರೆ, ವಿಜಯೇಂದ್ರ, ಭ್ರಷ್ಟಾಚಾರ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದೇ ಮೊದಲಲ್ಲ ಹಿಂದಿನಿಂದಲೂ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆದರೆ ವಿಜಯೇಂದ್ರ ಮನೆ ಮನೆಗೆ ಹೋಗಿ ಜನರ ಮನವೊಲಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೋಲು ನಿಶ್ಚಿತ ಅನ್ನೋದು ಮನವರಿಕೆಯಾಗಿದೆ. ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಬಗ್ಗೆ ಕ್ಷೇತ್ರದಲ್ಲಿ ಒಲವಿದೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾರಿಗೆ ಮುಷ್ಕರಕ್ಕೆ ಹೆದರುವ ಪ್ರಶ್ನೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ, ಕೂಡಲೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಈಗಾಗಲೇ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

Click to comment

Leave a Reply

Your email address will not be published. Required fields are marked *