Districts
ಮುರಡೇಶ್ವರ ನಿರ್ಮಾಣದ ಕರ್ತೃ, ಉದ್ಯಮಿ ಆರ್.ಎನ್ ಶೆಟ್ಟಿ ನಿಧನ

– ಸಿಎಂ ಬಿಎಸ್ವೈ ಸಂತಾಪ
ಕಾರವಾರ: ಮುರಡೇಶ್ವರ ನಿರ್ಮಾಣದ ಕರ್ತೃ ಉದ್ಯಮಿ ಆರ್. ಎನ್ ಶೆಟ್ಟಿ(93) ಬೆಂಗಳೂರಿನಲ್ಲಿ ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ನಿಧನ ಹೊಂದಿದ್ದಾರೆ.
1928 ಆಗಸ್ಟ್ 15 ರಂದು ಭಟ್ಕಳ ತಾಲೂಕಿನ ಮುರಡೇಶ್ವರದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ರಾಮ ನಾಗಪ್ಪ ಶೆಟ್ಟಿ, ಮರಡೇಶ್ವರದಲ್ಲಿ 123 ಅಡಿ ಎತ್ತರದ ಶಿವನ ಮೂರ್ತಿ ನಿರ್ಮಾಣ ಮಾಡುವ ಮೂಲಕ ಮುರಡೇಶ್ವರದ ಅಭಿವೃದ್ಧಿಗೆ ಕಾರಣರಾಗಿದ್ದರು.
ಮುರಡೇಶ್ವರ ದೇವಸ್ಥಾನದ ಅಧ್ಯಕ್ಷರಾಗಿರುವ ಇವರು 1967 ರಲ್ಲಿ ಆರ್ಎನ್ ಶೆಟ್ಟಿ ಆಂಡ್ ಕಂಪನಿ ಪ್ರಾರಂಭಿಸಿದರು. ಕಟ್ಟಡ ನಿರ್ಮಾಣ, ಹೋಟೆಲ್ ಉದ್ಯಮ, ವೈದ್ಯಕೀಯ ರಂಗ, ಶಿಕ್ಷಣ ಕ್ಷೇತ್ರ ಸಮಾಜ ಸೇವೆಯ ಮೂಲಕ ದೇಶ ವಿದೇಶದಲ್ಲಿ ಹೆಸರು ಮಾಡಿದ್ದಾರೆ. ಇವರ ಸೇವೆ ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ 2009-10 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ಟೀಟ್ ಮಾಡಿ ಶೋಕ ಸಂದೇಶ ತಿಳಿಸಿದ್ದಾರೆ. ಮೃತರು ಮೂರು ಗಂಡು, ನಾಲ್ಕು ಮಂದಿ ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬೆಂಗಳೂರಿನ ಅವರ ಸ್ವ ಗೃಹದಲ್ಲಿ ನಡೆಯುವ ಸಾಧ್ಯತೆಗಳಿವೆ.
ನಾಡಿನ ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ
— B.S. Yediyurappa (@BSYBJP) December 17, 2020
