Thursday, 21st November 2019

ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

ಶಿವಮೊಗ್ಗ: ರಸ್ತೆಯಲ್ಲಿ ಬರುತ್ತಿದ್ದಾಗ ತಮ್ಮ ಕಾರಿಗೆ ಸೈಡ್ ಕೊಡದ ಖಾಸಗಿ ಬಸ್ಸೊಂದರ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಾರಿನಲ್ಲಿದ್ದ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಬ್ರಿ ಬಳಿ ನಡೆದಿದೆ.

ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್ ಶೆಟ್ಟಿ ಹಾಗೂ ಚಾಲಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಪರಿಣಾಮ ನಿರ್ವಾಹಕ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಸ್ ಆಗುಂಬೆ ಘಾಟಿಯಲ್ಲಿ ಬರುವಾಗ ಹಿಂದೆ ಬರುತ್ತಿದ್ದ ಕಾರಿನವರು ನಿರಂತರ ಹಾರ್ನ್ ಮಾಡಿದ್ದಾರೆ. ಈ ವೇಳೆ ತಿರುವುಗಳು ಇದ್ದ ಕಾರಣ ಚಾಲಕ ವಾಹನಕ್ಕೆ ಸೈಡ್ ಕೊಟ್ಟಿರಲಿಲ್ಲ. ಅಲ್ಲದೆ ಬಸ್ ಬಾಗಿಲ ಬಳಿ ಇದ್ದ ನಿರ್ವಾಹಕ ಕಾರಿನಲ್ಲಿ ಇದ್ದವರಿಗೆ `ಸ್ವಲ್ಪ ತಾಳಿ, ಹಾರ್ನ್ ಮಾಡಬೇಡಿ’ ಎಂದಿದ್ದಾರೆ.

ಇಷ್ಟಕ್ಕೆ ಕಾರಿನಲ್ಲಿ ಇದ್ದವರು ಕೋಪಗೋಡಿದ್ದಾರೆ. ವಾಹನ ಸೋಮೇಶ್ವರ ದಾಟಿದ ನಂತರ ಕಾಡು ಪ್ರದೇಶದಲ್ಲಿ ಬಸ್ ಅಡ್ಡ ಗಟ್ಟಿ ನಿರ್ವಾಹಕನನ್ನು ಬಸ್ಸಿನಿಂದ ಹೊರಗೆಳೆದು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ. ಅಲ್ಲದೆ ಬಸ್ಸಿನ ಒಳಗಡೆ ಹಲ್ಲೇ ನಡೆಸಿದ್ದಾರೆ. ಈ ಪುಂಡರ ಆರ್ಭಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಸುಮ್ಮನೆ ಕುಳಿತ್ತಿದ್ದರು.

ಈ ಪುಂಡರು ಬೇರೆ ಊರಿನಿಂದ ಈ ಭಾಗಕ್ಕೆ ಪ್ರವಾಸ ಬಂದವರು ಎನ್ನಲಾಗಿದ್ದು, ಹಲ್ಲೆಯ ದೃಶ್ಯಾವಳಿಗಳು ಬಸ್ಸಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *