Wednesday, 13th November 2019

Recent News

‘ಕಾವೇರಿ’ ಆಸೆ ಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಗೊಂದಲ ಇನ್ನೂ ಮುಗಿದಿಲ್ಲ. ವಾಸ್ತವ್ಯ ಇರುವ ಕಾವೇರಿ ನಿವಾಸ ತಮಗೆ ಸಿಗಲ್ಲ ಎಂಬ ಸಂಗತಿ ಅರಿವಾದ ಬಳಿಕ ಮಾಜಿ ಸಿಎಂ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಾಸವಿದ್ದ ಗಾಂಧಿಭವನ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಹೊಸ ಪತ್ರವನ್ನು ಸಿದ್ದರಾಮಯ್ಯ ಬರೆದಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿ ಗಾಂಧಿಭವನ ರಸ್ತೆಯಲ್ಲಿರುವ ನಿವಾಸದಲ್ಲಿ ಮಾಜಿ ಸಚಿವ ಎಚ್‍ಡಿ ರೇವಣ್ಣ ವಾಸವಿದ್ದರು. ಈ ನಿವಾಸವನ್ನು ತಮಗೆ ಹಂಚಿಕೆ ಮಾಡಿ ಕೊಡಿ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸರ್ಕಾರ ಹಂಚಿಕೆ ಮಾಡಿರುವ ರೇಸ್ ವ್ಯೂ ಕಾಟೇಜ್ ಬೇಡ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಹೊಸ ನಿವಾಸ ಪಡೆಯುವುದರಿಂದ ಮತ್ತೆ ಅದೃಷ್ಟದ ಬಾಗಿಲು ತೆರೆಯುತ್ತಾ ಎಂಬ ಲೆಕ್ಕಾಚಾರಗಳು ನಡೆದಿದೆ. 2013 ರ ವೇಳೆಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿ ವಾಸವಿದ್ರು. ಸದ್ಯ ಮತ್ತೆ ಇದೇ ನಿವಾಸವನ್ನು ಸಿದ್ದರಾಮಯ್ಯ ಅವರು ನೀಡಲು ಮನವಿ ಮಾಡಿರುವುದರಿಂದ ಮತ್ತೆ ಸಿಎಂ ಆಗುವ ಅದೃಷ್ಟ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಸದ್ಯ ಗಾಂಧಿಭವನದ ರಸ್ತೆಯಲ್ಲಿರುವ ಈ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಕಾಗೇರಿ ಅವರು ಇನ್ನೂ ಈ ನಿವಾಸದಲ್ಲಿ ವಾಸ್ತವ್ಯ ಆರಂಭಿಸಿಲ್ಲ. ಹೀಗಾಗಿ ಸಿದ್ದರಾಮಯ್ಯರ ಹೊಸ ಮನವಿಗೆ ಸಿಎಂ ಅವರು ಸ್ಪಂದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *