Advertisements

ದೆಹಲಿಯಲ್ಲಿ ಹೈಡ್ರಾಮಾ – ಸುಪ್ರೀಂನಿಂದ ತಡೆ ಆದೇಶ ಬಂದ ಬಳಿಕವೂ 2 ಗಂಟೆ ಘರ್ಜಿಸಿದ ಜೆಸಿಬಿ

ನವದೆಹಲಿ: ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎನ್‌ಡಿಎಂಸಿ) ನಡೆಸುತ್ತಿದ್ದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದು ಬೆಳಗ್ಗೆ 10:45ಕ್ಕೆ. ಆದರೆ ತೆರವು ಕಾರ್ಯಾಚರಣೆ ನಿಂತಿದ್ದು ಮಧ್ಯಾಹ್ನ12:45ಕ್ಕೆ. ಎರಡು ಗಂಟೆ ಭಾರೀ ಹೈಡ್ರಾಮಾ ನಡೆದಿದ್ದು ಈಗ ಪಾಲಿಕೆಯ ನಿರ್ಧಾರದ ಬಗ್ಗೆ ಪರ/ವಿರೋಧ ಚರ್ಚೆ ಆರಂಭವಾಗಿದೆ.

Advertisements

ಬೆಳ್ಳಂಬೆಳಗ್ಗೆ ಘರ್ಜನೆ:
ಕಳೆದ ಶನಿವಾರ ಹನುಮ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾದ ರಾಜಧಾನಿ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಗಲಭೆಕೋರರಿಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಬಿಸಿ ಮುಟ್ಟಿಸಲು ಬಿಜೆಪಿ ನೇತೃತ್ವದ ಪಾಲಿಕೆ ಮುಂದಾಗಿತ್ತು. ಕೇಂದ್ರ ಗೃಹ ಇಲಾಖೆಯ ಸೂಚನೆಯ ಮೇರೆಗೆ ಪೊಲೀಸ್‌ ಬಿಗಿ ಬಂದೋಬಸ್ತ್‌ನೊಂದಿಗೆ ಪಾಲಿಕೆ ನೆಲಸಮ ಕಾರ್ಯಾಚರಣೆಯನ್ನು ಚುರುಕುಗೊಳಿಸಿತ್ತು. ಇಂದು ಬೆಳಗ್ಗಿನಿಂದ 9 ಬುಲ್ಡೋಜರ್‌ಗಳು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದವು.

Advertisements

ಸುಪ್ರೀಂ ಆದೇಶ:
ಯಾವುದೇ ನೋಟಿಸ್‌ ನೀಡದೇ ನೆಲಸಮ ಮಾಡುತ್ತಿರುವುದನ್ನು ಪ್ರಶ್ನಿಸಿ ಜಮಾತೆ ಉಲೆಮಾ ಹಿಂದ್‌ ಸಂಘಟನೆ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹಿರಿಯ ವಕೀಲರಾದ ದುಷ್ಯಂತ್‌ ದಾವೆ, ಕಪಿಲ್‌ ಸಿಬಲ್‌, ಪಿ.ವಿ.ಸುರೇಂದ್ರನಾಥ್‌ ಹಾಗೂ ಪ್ರಶಾಂತ್‌ ಭೂಷಣ್‌ ಅವರು ತೆರವು ಪ್ರಶ್ನಿಸಿ ಸಿಜೆಐ ಎನ್.ವಿ.ರಮಣ ಅವರ ಮುಂದೆ ವಿಷಯ ಪ್ರಸ್ತಾಪಿಸಿದರು. ಗಲಭೆ ಪೀಡಿತ ಜಹಾಂಗೀರ್‌ಪುರಿಯಲ್ಲಿ ಪಾಲಿಕೆ ನಡೆಸುತ್ತಿರುವ ಕಾರ್ಯಾಚರಣೆ ಕಾನೂನುಬಾಹಿರವಾಗಿದೆ. ಈ ಸಂಬಂಧ ಯಾರಿಗೂ ಯಾವುದೇ ನೋಟಿಸ್‌ ನೀಡಿಲ್ಲ. ಹೀಗಾಗಿ ತಡೆ ನೀಡಬೇಕು ಎಂದು ಮನವಿ ಮಾಡಿದರು. ಅರ್ಜಿಯನ್ನು ಮಾನ್ಯ ಮಾಡಿದ ಸಿಜಿಐ ತೆರವು ಕಾರ್ಯಾಚರಣೆಗೆ ತಡೆ ನೀಡಿ ಯಥಾಸ್ಥಿತಿಯಲ್ಲಿರುವಂತೆ ಆದೇಶಿಸಿದರು. ಅಷ್ಟೇ ಅಲ್ಲದೇ ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿದರು.  ಇದನ್ನೂ ಓದಿ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ – ಹಾಕದಿದ್ದರೆ 500 ರೂ. ದಂಡ

ತಡೆಯ ಬಳಿಕವೂ ಕಾರ್ಯಾಚರಣೆ:
ಕೋರ್ಟ್‌ ಬೆಳಗ್ಗೆ 10:45ಕ್ಕೆ ತಡೆ ನೀಡಿದರೂ ತೆರವು ಕಾರ್ಯಾಚರಣೆ ಮತ್ತೆ ಮುಂದುವರಿದಿತ್ತು. ಯಾಕೆ ಕಾರ್ಯಾಚರಣೆ ನಿಲ್ಲಸಲ್ಲ ಎಂಬ ಪ್ರಶ್ನೆಗೆ ಮೇಯರ್‌ ರಾಜಾ ಇಕ್ಬಾಲ್‌ ಸಿಂಗ್‌, ನಮಗೆ ಇನ್ನೂ ಕೋರ್ಟ್‌ ಆದೇಶ ತಲುಪಿಲ್ಲ. ಕೋರ್ಟ್‌ ಆದೇಶ ಬರುವವರೆಗೂ ತೆರವು ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಹೇಳಿದರು.

Advertisements

ಮತ್ತೆ ಮನವಿ:
ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕವೂ ತೆರವು ಕಾರ್ಯಾಚರಣೆ ಮುಂದುವರಿಯುತ್ತಿರುವುದನ್ನು ಆಕ್ಷೇಪಿಸಿ ಹಿರಿಯ ವಕೀಲ ದುಷ್ಯಂತ್‌ ದಾವೆ ಮತ್ತೆ ಸಿಜೆಐ ರಮಣ ಗಮನಕ್ಕೆ ತಂದರು. ಸಿಜೆಐ ಕೂಡಲೇ ಕೋರ್ಟ್‌ ಆದೇಶವನ್ನು ಉತ್ತರ ದೆಹಲಿಯ ಮೇಯರ್‌, ಎನ್‌ಡಿಎಂಸಿ ಆಯುಕ್ತ ಮತ್ತು ದೆಹಲಿ ಪೊಲೀಸ್‌ ಆಯುಕ್ತರಿಗೆ ನೀಡುವಂತೆ ಕೋರ್ಟ್‌ ರಿಜಿಸ್ಟ್ರಿಗೆ ಸೂಚಿಸಿದರು.

ಕಾರ್ಯಾಚರಣೆ ಸ್ಥಗಿತ:
ಕೋರ್ಟ್‌ ಆದೇಶದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ತೆರವು ಕಾರ್ಯಾಚರಣೆ 2 ಗಂಟೆ ಮುಂದುವರಿದಿತ್ತು. ಆದೇಶದ ಪ್ರತಿ ತಲುಪಿದ ಬಳಿಕ ಮಧ್ಯಾಹ್ನ 12:45ರ ವೇಳೆಗೆ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಇದನ್ನೂ ಓದಿ: ದ್ವೇಷದ ಬುಲ್ಡೋಜರ್‌ಗಳನ್ನು ಆಫ್ ಮಾಡಿ: ರಾಹುಲ್ ಗಾಂಧಿ

ಭಾರೀ ಹೈಡ್ರಾಮಾ:
ಕೋರ್ಟ್‌ ಆದೇಶವಿದ್ದರೂ ತೆರವು ಕಾರ್ಯಾಚರಣೆ ಮುಂದುವರಿಸಿದ ಹಿನ್ನೆಲೆಯಲ್ಲಿ ಜಹಾಂಗೀರ್‌ಪುರಿ ಭಾರೀ ಹೈಡ್ರಾಮಾವೇ ನಡೆದಿತ್ತು. ಸಿಪಿಎಂ ನಾಯಕಿ ಬೃಂದಾ ಕಾರಟ್‌ ಸ್ಥಳಕ್ಕೆ ಭೇಟಿ ನೀಡಿ, ಕೋರ್ಟ್‌ ಬೆಳಗ್ಗೆ 10:45ಕ್ಕೆ ತಡೆ ನೀಡಿದೆ. ಆದರೂ ಕಾರ್ಯಾಚರಣೆ ಮುಂದುವರಿಸುತ್ತಿರುವುದು ಎಷ್ಟು ಸರಿ? ನಾನು ಆದೇಶವನ್ನು ಜಾರಿ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಕೇವಲ ಮುಸ್ಲಿಂ ಸಮುದಾಯದ ಅಕ್ರಮ ಕಟ್ಟಡಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಬೇರೆ ಧರ್ಮದವರ ಪ್ರಾರ್ಥನ ಮಂದಿರವನ್ನು ಕೆಡವಿಲ್ಲ ಯಾಕೆ ಎಂದು ಅಲ್ಲಿನ ಜನ ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರೀ ಚರ್ಚೆ:
ಸಾಮಾಜಿಕ ಜಾಲತಾಣದಲ್ಲಿ ದೆಹಲಿಯ ನೆಲಸಮ ವಿಚಾರ ಈಗ ಭಾರೀ ಚರ್ಚೆ ನಡೆಯುತ್ತಿದೆ. ಕೋರ್ಟ್‌ ಆದೇಶವಿದ್ದರೂ ಕಾರ್ಯಾಚರಣೆ ಮುಂದುವರಿಸಿದ್ದು ತಪ್ಪು ಎಂದು ಹೇಳಿದರೆ ಕೆಲವರು ಅಂದು ಕಂಗನಾ ಮನೆಯನ್ನು ಕೆಡವುವ ವೇಳೆ ಕೋರ್ಟ್‌ ಆದೇಶ ಇನ್ನೂ ತಲುಪಿಲ್ಲ ಎಂದು ಬಿಎಂಸಿ ಹೇಳಿತ್ತು. ಹೀಗಾಗಿ ಇಲ್ಲೂ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisements
Exit mobile version