Connect with us

Belgaum

1 ಲಕ್ಷಕ್ಕೆ ಹೋರಿ ಖರೀದಿ, 8 ತಿಂಗಳ ಬಳಿಕ ಬೆಲೆ ಎಷ್ಟು ಗೊತ್ತಾ?

Published

on

– ದೇಶಿ ಸಂತತಿ ಉಳಿಸಲು ಹೋರಿ ಖರೀದಿಸಿದ ರೈತ

ಚಿಕ್ಕೋಡಿ: ಒಂದೆಡೆ ಉಳುಮೆ ಮಾಡಲು ಜಾನುವಾರು ಸಿಗುತ್ತಿಲ್ಲ ಎಂಬ ಅಳಲು ಕೆಲವು ರೈತರದ್ದು, ಆದರೆ ಲಕ್ಷಗಟ್ಟಲೆ ಬೆಲೆ ಬಾಳುವ ಹೋರಿಗಳು ಮಾರುಕಟ್ಟೆಯಲ್ಲಿ ಕಾಣಸಿಗುವುದು ಇತ್ತೀಚೆಗೆ ಮಾಮೂಲಾಗಿದೆ. ಅದೇ ರೀತಿ ರೈತರೊಬ್ಬರು 1 ಲಕ್ಷ ಕೊಟ್ಟು 6 ತಿಂಗಳ ಹೋರಿಕರು ಖರೀದಿಸಿ 8 ತಿಂಗಳು ಸಾಕಿ ದಾಖಲೆಯ ಬೆಲೆ ಮಾರಾಟ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕುರುಬಗೋಡಿಯ ರೈತ ಅಡಿವೆಪ್ಪ ಪದ್ಮಣ್ಣ ಕುರಿಯವರ ಈ ಹೋರಿ ಅಂತಿಂತ ಹೋರಿಯಲ್ಲ. ಈ ಹೋರಿಯನ್ನು ರೈತ ಅಡಿವೆಪ್ಪ ಅವರು 6 ತಿಂಗಳ ಕರು ಇದ್ದಾಗ ಕೇವಲ 1 ಲಕ್ಷದ 100 ರೂಪಾಯಿಗೆ ಖರೀದಿ ಮಾಡಿದ್ದರು. ಸತತ 8 ತಿಂಗಳ ಕಾಲ ಮೇಯಿಸಿ, ಜೋಪಾನ ಮಾಡಿದ ಬಳಿಕ ರೈತ ಈ ಹೋರಿಯನ್ನು ಮಾರಾಟ ಮಾಡೋಕೆ ರೆಡಿಯಾಗಿದ್ದಾರೆ. ಇವರು ಹೋರಿ ಮಾರಾಟ ಮಾಡುತ್ತಿರುವ ಸುದ್ದಿ ತಿಳಿದಿದ್ದೇ ತಡ ಮಾಹಾರಾಷ್ಟ್ರದ ಇನ್ನೊಬ್ಬ ರೈತ ಬರೊಬ್ಬರಿ 5 ಲಕ್ಷ 15 ಸಾವಿರ ರೂಪಾಯಿಯ ಭಾರೀ ಮೊತ್ತಕ್ಕೆ ಖರೀದಿ ಮಾಡಿದ್ದಾರೆ.

ರಾಜ್ಯದಲ್ಲಿ ದೇಸಿ ತಳಿಯ ಉಳಿವಿಗಾಗಿ ಈಗಾಗಲೇ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಹಾಗೂ ಪ್ರಾಣಿವಧೆ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದೆ. ಸದ್ಯ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಇದೊಂದೆ ದೇಶಿ ಥಳಿಯ ಖಿಲಾರಿ ಹೋರಿ. ಹೀಗಾಗಿ ಭಾರೀ ಮೊತ್ತಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಂಗಲವೇಡಾ ತಾಲೂಕಿನ ನಂದೇಶ್ವರ ಗ್ರಾಮದ ಸೈನಿಕ ದತ್ತಾ ಕರಡೆ ಅವರು ಖರೀದಿ ಮಾಡಿದ್ದು, ಸದ್ಯ ಈ ಹೋರಿಯ ಮೊತ್ತ ಈಗ ಎಲ್ಲರ ತಲೆ ಕೆಡಿಸಿದೆ. ಅಷ್ಟಕ್ಕೂ ಅವರು ಇಷ್ಟು ದೊಡ್ಡ ಮೊತ್ತ ಕೊಟ್ಟು ಹೋರಿ ಖರೀದಿ ಮಾಡಲು ಕಾರಣವೇನು ಗೊತ್ತಾ.

ದೇಶಿ ತಳಿಯನ್ನು ವೃದ್ಧಿಸಲು ಈ ಹೋರಿಯನ್ನು ಭಾರಿ ಮೊತ್ತಕ್ಕೆ ಖರೀದಿ ಮಾಡಿರುವ ದತ್ತಾ ಕರಡೆ, ಈ ಹೋರಿಯನ್ನು ಇಟ್ಟುಕೊಂಡು ಗೋವುಗಳ ಸಂತತಿ ಹೆಚ್ಚಿಸುವ ಯೋಜನೆ ಹೊಂದಿದ್ದಾರೆ ಎನ್ನುವುದು ವಿಶೇಷ. ಈ ಹೋರಿಯಿಂದ ಮತ್ತೊಂದು ಹೋರಿಯೇ ಜನಿಸಿದರೆ ಅಥವಾ ಹೆಣ್ಣು ಕರುವಿಗೆ ಜನ್ಮ ನೀಡಿದರೂ ಶ್ರೇಷ್ಠ ಎನ್ನುವುದು ಗೋವು ಪ್ರೀಯರ ಮಾತು. ಅದೇನೆ ಇರಲಿ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವ ಹೋರಿ ಈಗ ಎಲ್ಲರ ಹಾಟ್ ಫೇವರಿಟ್ ಆಗಿರುವುದಂತೂ ನಿಜ.

Click to comment

Leave a Reply

Your email address will not be published. Required fields are marked *

www.publictv.in