Recent News

100 ವರ್ಷದ ಹಳೆಯ ಕಟ್ಟಡ ಕುಸಿತ- 50 ಮಂದಿ ಸಿಲುಕಿರುವ ಶಂಕೆ

– ಇಬ್ಬರು ಸಾವು, ಮೂವರಿಗೆ ಗಾಯ

ಮುಂಬೈ: ನಗರದಲ್ಲಿ 4 ಅಂತಸ್ತಿನ 100 ವರ್ಷದ ಹಳೆಯ ಕಟ್ಟಡ ಕುಸಿದಿದ್ದು, 40ರಿಂದ 50 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಈ ಘಟನೆ ದಕ್ಷಿಣ ಡೊಂಗ್ರಿಯಲ್ಲಿ ಇಂದು ಬೆಳಗ್ಗೆ 11.40ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮಗು ಸೇರಿ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರಲ್ಲಿ ಐವರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಎನ್‍ಡಿ ಆರ್‍ಎಫ್ (ಕೇಂದ್ರ ವಿಪತ್ತು ನಿರ್ವಹಣಾ ತಂಡ)ದಿಂದ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಮೃತ ವ್ಯಕ್ತಿಯನ್ನು 45 ವರ್ಷದ ಅಬ್ದುಲ್ ಸತ್ತರ್ ಎಂದು ಗುರುತಿಸಲಾಗಿದೆ. ದುರಂತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಗುರುತು ಪತ್ತೆ ಆಗಿಲ್ಲ. ಮುಂಬೈ ಪೊಲೀಸ್ ಅಧಿಕಾರಿ ಸಂಜಯ್ ಬಾರ್ವೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಕೆಲ ವಾರಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಿಂದ ಕಟ್ಟಡ ಶಿಥಿಲಗೊಂಡಿತ್ತು. ಇಂದು ಈ ಕಟ್ಟಡ ಕುಸಿದುಬಿದ್ದಿದೆ. ಘಟನೆ ನಡೆದ ತಕ್ಷಣವೇ ಅಂಬುಲೆನ್ಸ್ ಹಾಗೂ ಟ್ರಕ್ ಗಳು ಸ್ಥಳಕ್ಕೆ ದೌಡಾಯಿಸಿವೆ. ಕಟ್ಟಡ ಕುಸಿದು ಬಿದ್ದ ಪ್ರದೇಶ ಕಿರಿದಾಗಿದ್ದರಿಂದ ಸ್ವಲ್ಪ ದೂರದಲ್ಲಿ ಅವುಗಳನ್ನು ನಿಲ್ಲಿಸಿ ರಕ್ಷಣಾ ಕಾರ್ಯ ಮಾಡಲಾಗುತ್ತಿದೆ.

ನಮಗೆ ಜೋರಾದ ಶಬ್ಧವೊಂದು ಕೇಳಿಸಿತ್ತು. ಅಲ್ಲದೆ ಎಲ್ಲರೂ ಕಟ್ಟಡ ಕುಸಿಯಿತು, ಕಟ್ಟಡ ಕುಸಿಯಿತು ಎಂದು ಜೋರಾಗಿ ಕಿರುಚಾಡುತ್ತಿದ್ದರು. ಹೀಗಾಗಿ ಶಬ್ಧ ಕೇಳಿದ ಕಡೆ ಓಡಿದೆ. ಆದರೆ ಅಲ್ಲಿ ಭೂಕಂಪ ಸಂಭವಿಸಿರಬಹುದೆಂದು ನಾನು ಭಾವಿಸಿದೆ ಎಂದು ಯುವಕನೊಬ್ಬ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ವಿವರಿಸಿದ್ದಾನೆ.

ಈ ಕಟ್ಟಡ ಸುಮಾರು 90ರಿಂದ 100 ವರ್ಷ ಹಳೆಯದಾಗಿದ್ದು, ಕಟ್ಟಡದಡಿ ಸಿಲುಕಿ ಮೃತಪಟ್ಟ ಪುಟ್ಟ ಮಕ್ಕಳ ಮೃತದೇಹವನ್ನು ನೋಡಿದೆ. ಇಲ್ಲಿ ಸುಮಾರು 7ರಿಂದ 8 ಕುಟುಂಬಗಳು ವಾಸವಾಗಿತ್ತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *