Sunday, 21st July 2019

7 ದಿನ ಕಾರ್ಯಾಚರಣೆ – 19 ಮಂದಿ ದುರ್ಮರಣ, 57ಕ್ಕೂ ಹೆಚ್ಚು ಜನರ ರಕ್ಷಣೆ

– ಧಾರವಾಡ ಜನತೆ, ಮಾಧ್ಯಮದವರಿಗೆ ಜಿಲ್ಲಾಧಿಕಾರಿ ಧನ್ಯವಾದ
– ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ

ಧಾರವಾಡ: ಕಟ್ಟಡ ದುರಂತದಲ್ಲಿ ಸಾವನ್ನಪ್ಪಿದ ಸಂಖ್ಯೆ 19 ಕ್ಕೆ ಏರಿಕೆಯಾಗಿದ್ದು, ಕಳೆದ 7 ದಿನಗಳಿಂದ ಅಗ್ನಿ ಶಾಮಕ ದಳ, ಎನ್‍ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಡೆಸಿದ ಕಾರ್ಯಾಚರಣೆಯಲ್ಲಿ 19 ಶವಗಳನ್ನ ಹೊರ ತೆಗೆಯಲಾಗಿದ್ದು, 57 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ಇನ್ನು ಇಂದು ಹೊರ ತೆಗೆದ 3 ಜನರನ್ನು ನವಲು ಝಾರೆ, ವಾಘೂ ಜಾರೆ ಹಾಗೂ ಸಹದೇವ ಸಾಳುಂಕೆ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕಾಣೆಯಾದ ಈ ಮೂವರನ್ನು ಹುಡುಕುವ ಕಾರ್ಯ ಕಳೆದ 7 ದಿನಗಳಿಂದ ನಡೆದಿತ್ತು. ಆದರೆ ಈ ಮೂವರನ್ನು ಹೊರತು ಪಡಿಸಿ ಉಳಿದವರ ಶವಗಳು ಪತ್ತೆಯಾಗಿದ್ದವು. ತಡ ರಾತ್ರಿ ಕೂಡಾ ಕಾರ್ಯಾಚರಣೆ ನಡೆಸಿ ಈ ಮೂರು ಶವಗಳನ್ನು ಹೊರ ತೆಗೆಯುವಲ್ಲಿ ಅಗ್ನಿ ಶಾಮಕ ದಳ ಸಫಲವಾಗಿದೆ.

ಇಂದು ಸಿಕ್ಕ ಮೂರು ಶವಗಳಲ್ಲಿ ಕಟ್ಟಡದ ಸೂಪರ್ ವೈಸರ್ ಸಹದೇವ ಸಳುಂಕೆ, ವಾಘು ಜಾರೆ ಹಾಗೂ ನವಲೂ ಜಾರೆಯ ಶವಗಳನ್ನ ಹೊರ ತೆಗೆಯಲಾಯಿತು. ಇದರಲ್ಲಿ ವಾಘು ಹಾಗೂ ನವಲೂ ಇಬ್ಬರು ಕಾಕಾ ಚಿಕ್ಕಪ್ಪನ ಮಕ್ಕಳು ಎಂದು ತಿಳಿದು ಬಂದಿದೆ.

ಕಟ್ಟಡದ ದುರಂತ ಸ್ಥಳದಲ್ಲಿ ಶೇ.90ರಷ್ಟು ತೆರವು ಕಾರ್ಯಾಚರಣೆ ಆಗಿದೆ. ಗಾಯಾಳುಗಳಿಗೆ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆಯೊಳಗೆ ಎಲ್ಲ ಕೆಲಸ ಮುಗಿಯಲಿದೆ. ಈ ಘಟನೆಯಲ್ಲಿ ಸ್ಥಳೀಯರು ಬಹಳ ಜನರ ಜೀವ ಉಳಿಸಿದ್ದಾರೆ. ಜಿಲ್ಲಾಡಳಿತದಿಂದ ನಾವು ಅವರ ಮೇಲೆ ಚಿರರುಣಿಯಾಗಿರುತ್ತೇವೆ. ಜನರಿಗೆ ಮಾಹಿತಿ ಮುಟ್ಟಿಸಿದ ಮಾಧ್ಯಮದವರು ಕೂಡಾ ನಮಗೆ ಸಹಾಯ ಮಾಡಿದ್ದಾರೆ ಅವರಿಗೂ ಧನ್ಯವಾದ. ನಾವು ಉಳಿದ ಕಟ್ಟಡಗಳ ಗುಣಮಟ್ಟದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, 7 ದಿನ ನಡೆದ ರಕ್ಷಣಾ ಖರ್ಚನ್ನು ಜಿಲ್ಲಾಡಳಿತ ಭರಿಸಲಿದೆ. ಮುಂದೆ ಮಾಲಿಕರಿಂದ ವಸೂಲಿ ಮಾಡಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಕೃತಜ್ಞತೆ ಹೇಳಿದ್ದಾರೆ.

ಕಟ್ಟಡ ದುರಂತ ಕಾರ್ಯಾಚರಣೆಯಲ್ಲಿ 288 ಅಗ್ನಿಶಾಮಕ ದಳ ಮತ್ತು 32 ಎಸ್‌ಡಿಆರ್‌ಎಫ್ ತಂಡದ ಸದಸ್ಯರು ಭಾಗವಹಿಸಿದ್ದಾರೆ. ಇದುವರೆಗೂ ಇಂಥ ಕಾರ್ಯಾಚರಣೆ ನಡೆದಿಲ್ಲ. ದೇಶದಲ್ಲಿಯೇ ಇಂತಹ ಘಟನೆ ನಡೆದಿಲ್ಲ. ಈ ಕಾರ್ಯಚರಣೆಯಲ್ಲಿ 57 ಜನರ ಜೀವ ಉಳಿಸಲಾಗಿದೆ. 19 ಜನರ ಶವ ಹೊರತೆಗೆಯಲಾಗಿದೆ. ಈ ಕಾರ್ಯಚರಣೆಯಲ್ಲಿ ಪ್ರತಿಯೊಬ್ಬರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಜನರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ. ಶ್ರಮಿಸಿದ ಸಿಬ್ಬಂದಿಗೆ ಸೂಕ್ತ ಬಹುಮಾನ ಕೊಡಲು ನಿರ್ಧರಿಸಿದ್ದು, ಸರ್ಕಾರದಿಂದ ಸೂಚನೆ ಬಂದಿದೆ. ಈಗಾಗಲೇ ಸರ್ಕಾರಕ್ಕೆ ಸಿಬ್ಬಂದಿ ಪಟ್ಟಿ ಕಳಿಸುತ್ತಿದ್ದೇವೆ ಎಂದು ಅಗ್ನಿಶಾಮಕ ದಳದ ಡಿಐಜಿ ರವಿಕಾಂತೇಗೌಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *