Wednesday, 11th December 2019

ಮೋದಿ 2 ಸರ್ಕಾರದ ಬಜೆಟ್ – ದೇಶದ ಜನತೆಗೆ ಸಿಹಿಯೋ? ಕಹಿಯೋ?

ಬೆಂಗಳೂರು: ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಬಜೆಟ್ ಶುಕ್ರವಾರ ಮಂಡನೆಯಾಗುತ್ತಿದೆ. ಆರ್ಥಿಕ ಸಚಿವೆಯಾಗಿ ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ವಿತ್ತೀಯ ಕೊರತೆ ನೀಗಿಸಿ, ಆರ್ಥಿಕ ಸಂಪನ್ಮೂಲದ ಕ್ರೋಢೀಕರಣ, ಉದ್ಯೋಗ ಸೃಷ್ಟಿಯೇ ಬಜೆಟ್ ಸವಾಲಾಗಿದೆ.

ಈ ಬಾರಿಯ ಬಜೆಟ್ ಮೇಲೆ ಶತಕೋಟಿ ಭಾರತೀಯರ ನಿರೀಕ್ಷೆ ಹೆಚ್ಚಿದ್ದು, ಅದರಲ್ಲೂ, ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿರು ಕಾರಣ ಮಧ್ಯಮ ವರ್ಗ ಹಾಗೂ ಮಹಿಳೆಯರ ನಿರೀಕ್ಷೆ ಜಾಸ್ತಿ ಇದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಆಗಲಿದೆ.

ಬಜೆಟ್ ಏನೆಲ್ಲಾ ಇರಲಿದೆ?
ನಿರ್ಮಲಾ ಸೀತಾರಾಮನ್ ಅವರ ಬಜೆಟ್‍ನಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದು, ಪ್ರಮುಖವಾಗಿ ಬಿಜೆಪಿ ಪ್ರಣಾಳಿಕೆ ‘ಸಂಕಲ್ಪ ಪತ್ರ’ದ ಈಡೇರಿಕೆಗೆ ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗಾಗಿ ಸೇನಾಪಡೆಗಳ ಆಧುನೀಕರಣ, ಬಲವರ್ಧನೆಗೆ ಹೆಚ್ಚಿನ ಆದ್ಯತೆ ಇದೆ. 45 ವರ್ಷಗಳಲ್ಲೇ ಹೆಚ್ಚಾಗಿರುವ ನಿರುದ್ಯೋಗ, ಬಡತನಕ್ಕೆ ಪರಿಹಾರ ಹಾಗೂ ರೈತರ ಆದಾಯ ದ್ವಿಗುಣಗೊಳಿಸಲು ಅನುದಾನ ಘೋಷಣೆ ಆಗುವ ನಿರೀಕ್ಷೆ ಇದೆ.

ರೈತರಿಗೆ ನೆರವು ನೀಡಲು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲದೊಂದಿಗೆ ಸುಸ್ಥಿರ ನೀರಾವರಿ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದು ಕ್ಷೇತ್ರಕ್ಕೆ ನೀಡುತ್ತಿದ್ದ, ಅನುದಾನದಲ್ಲಿ ಗಣನೀಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಮೋದಿ ಸರ್ಕಾರದ ಬಹು ನಿರೀಕ್ಷಿತ ಆಯುಷ್ಮಾನ್ ಭಾರತ್ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಿನ ಸೌಲಭ್ಯ ನೀಡುವ ಅವಕಾಶವಿದೆ. ಗ್ರಾಮೀಣ ಭಾಗದಲ್ಲಿ ಖಾಸಗಿ ಮತ್ತು ಸರ್ಕಾರದಿಂದ ಹೆಚ್ಚು ಹೂಡಿಕೆಗೆ ಅವಕಾಶ, ಡಿಜಿಟಲ್ ಬ್ಯಾಂಕಿಂಗ್‍ಗೆ ಮತ್ತಷ್ಟು ಒತ್ತು, ನವೋದ್ಯಮಗಳಿಗೆ ಇನ್ನಷ್ಟು ತೆರಿಗೆ ವಿನಾಯ್ತಿ, ಪ್ರೋತ್ಸಾಹ, ಬಂಡವಾಳ ಹೂಡಿಕೆ ಹಾಗೂ ಆದಾಯ ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ.

ಕನ್ನಡಿಗರ ಬೇಡಿಕೆಗಳೇನು?
ತಮಿಳುನಾಡಿನಲ್ಲಿ ಹುಟ್ಟಿ, ಆಂಧ್ರ ಪ್ರದೇಶದ ಸೊಸೆಯಾಗಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಬಗ್ಗೆ ದಕ್ಷಿಣ ಭಾರತೀಯರು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಅದರಲ್ಲೂ, ಕರ್ನಾಟಕದ್ದು ನಿರೀಕ್ಷೆಯೂ ದೊಡ್ಡದಿದೆ. ರಾಜ್ಯದ ರೈತರು ಗುಳೆ ಹೋಗುವುದನ್ನು ತಪ್ಪಿಸಲು ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ಕನ್ನಡಿಗರ ಪ್ರಮುಖ ಬೇಡಿಕೆ ಆಗಿದೆ. ಅಲ್ಲದೇ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ಸಮಗ್ರ ನೀತಿ, ಬರಕ್ಕೆ ತುತ್ತಾಗುತ್ತಿರುವ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊಯ್ಲು ಯೋಜನೆ ಸೇರಿದಂತೆ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಯೋಜನೆ ಹಾಗೂ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಒತ್ತು ನೀಡುವ ನಿರೀಕ್ಷೆ ಇದೆ.

ಚಿಕ್ಕಮಗಳೂರು-ಶಿವಮೊಗ್ಗದ ಆರ್ಥಿಕ ಬೆನ್ನೆಲುಬಾದ ಕಾಫಿ-ಅಡಕೆ ಬೆಳೆಗೆ ಪೂರಕ ಯೋಜನೆ ರೂಪಿಸುವುದು, ಕಾಳುಮೆಣಸು ಬೆಳೆಯುವ ಪ್ರದೇಶಗಳಿಗೆ ಪೂರಕವಾಗುವಂತೆ ಪೆಪ್ಪರ್ ಪಾರ್ಕ್ ಸ್ಥಾಪನೆ. ಜವಳಿ ಕ್ಷೇತ್ರಗಳ ಉತ್ತೇಜನಕ್ಕೆ ಪ್ರದೇಶವಾರು ಜವಳಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದು. ತುಮಕೂರಿನ ತಿಪಟೂರಿನಲ್ಲಿ ಜಾಗತಿಕ ಮಟ್ಟದ `ಕೊಬ್ಬರಿ ಸಂಶೋಧನಾ ಕೇಂದ್ರ’ ಸ್ಥಾಪನೆ ಹಾಗೂ ತುಮಕೂರು ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿ, ಮುಂಬೈ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಸೇರಿದಂತೆ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಉತ್ಪಾದನೆಗೆ ಉತ್ತೇಜನ ನೀಡುವುದು ಪ್ರಮುಖ ಬೇಡಿಕೆಗಳಿವೆ.

ಕೇಂದ್ರ ರೈಲ್ವೆ ಬಜೆಟ್ ಮೇಲೂ ಹೆಚ್ಚಿನ ನಿರೀಕ್ಷೆ ಇದ್ದು, ರೈಲ್ವೆಯಲ್ಲಿ ರಾಜ್ಯದ ಬೇಡಿಕೆಗಳೆಂದರೆ, ಹೊಸ ಮಾರ್ಗ, ಜೋಡಿ ಮಾರ್ಗ, ವಿದ್ಯುದ್ದೀಕರಣ, ಹೊಸ ರೈಲು, ಬೆಂಗಳೂರು ಉಪನಗರ ರೈಲು ಯೋಜನೆ, ನಿಲ್ದಾಣಗಳ ಅಭಿವೃದ್ಧಿಯ ಅಗತ್ಯವಿದೆ. ರಾಯದುರ್ಗ- ತುಮಕೂರು, ಬಾಗಲಕೋಟೆ-ಕುಡಚಿ, ಗದಗ- ವಾಡಿ ಕಾಮಗಾರಿ ಹಾಗೂ ಮುನಿರಾಬಾದ್- ರಾಯಚೂರು ರೈಲ್ವೆ ಮಾರ್ಗಗಳ ಕಾಮಗಾರಿ, ಧಾರವಾಡದಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆ ಪ್ರಮುಖ ಬೇಡಿಕೆಗಳಾಗಿವೆ. ಅಲ್ಲದೇ ಹುಬ್ಬಳ್ಳಿಯಿಂದ ಹೈ-ಕರ್ನಾಟಕದ ಮೂಲಕ ದೆಹಲಿಗೆ ರಾಜಧಾನಿ ಎಕ್ಸ್‍ಪ್ರೆಸ್ ರೈಲು ಹಾಗೂ ಹುಬ್ಬಳ್ಳಿಯಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಬೇಡಿಕೆಯೂ ಇದೆ.

Leave a Reply

Your email address will not be published. Required fields are marked *