Friday, 15th November 2019

Recent News

15 ವರ್ಷಗಳ ಇತಿಹಾಸ ಮುರಿದು ಜಾರಕಿಹೊಳಿ ಸೋದರರಿಗೆ ಶಾಕ್ ನೀಡಿದ ಬಿಎಸ್‍ವೈ

ಬೆಳಗಾವಿ: ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದರೂ ಅದರಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬಕ್ಕೆ ಒಂದು ಸಚಿವ ಸ್ಥಾನ ಮೀಸಲು ಎಂಬ ಮಾತು ಇತ್ತು. ಆದ್ರೆ ಇಂದಿನ ಸಿಎಂ ಯಡಿಯೂರಪ್ಪನವರ ಸಂಪುಟ ಹದಿನೈದು ವರ್ಷಗಳ ಇತಿಹಾಸ ಮುರಿದು

ಬೆಳಗಾವಿ ರಾಜಕಾರಣ ಅಂದರೆ ಜಾರಕಿಹೊಳಿ ಕುಟುಂಬ ಅನ್ನೋ ಹಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ರಾಜ್ಯ ಸರ್ಕಾರದ ಸಚಿವ ಸಂಪುಟದಿಂದ ಹಿಡಿದು ಜಿಲ್ಲಾ ರಾಜಕಾರಣದಲ್ಲೂ ತಮ್ಮದೇ ಹಿಡಿತ ಹೊಂದಿದ್ದ ಸಾಹುಕಾರರಿಗೆ ಸದ್ಯ ಯಡಿಯೂರಪ್ಪ ಸಂಪುಟ ಶಾಕ್ ಕೊಟ್ಟಿದೆ. ಅದು ಒಂದಲ್ಲಾ ಎರಡಲ್ಲಾ, ಮೂರ್ಮೂರು. ಮಧ್ಯರಾತ್ರಿವರೆಗೂ ಶಾಸಕ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೆಸರು ಸಚಿವ ಪಟ್ಟಿಯಲ್ಲಿತ್ತು. ಆದರೆ ರಾತ್ರೋರಾತ್ರಿ ಇಬ್ಬರು ಶಾಸಕರಿಗೆ ಕೊಕ್ ಕೊಡಲಾಗಿದೆ ಎನ್ನಲಾಗಿದೆ. ಇದಕ್ಕಿಂತ ಹೊಸ ಅಚ್ಚರಿ ಅಂದರೆ ಸೋತಿದ್ದ ಲಕ್ಷ್ಮಣ ಸವದಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ರಮೇಶ್ ಜಾರಕಿಹೊಳಿ ರಾಜಕೀಯ ವಿರೋಧಿ ಅಂತಾನೆ ಬಿಂಬಿತವಾಗಿದ್ದ ಲಕ್ಷ್ಮಣ ಸವದಿಗೆ ಮಿನಿಸ್ಟರ್ ಮಾಡಿದ್ದಕ್ಕೆ ಸಾಹುಕಾರ ಆಕ್ರೋಶಗೊಂಡಿದ್ದಾರೆ ಎನ್ನಲಾಗುತ್ತಿದೆ. 15 ವರ್ಷಗಳ ನಂತರ ಸಾಹುಕಾರರನ್ನ ಅಧಿಕಾರದಿಂದ ದೂರ ಇಡುವ ಪ್ರಯತ್ನ ನಡೆಯಿತಾ ಎಂಬುದಕ್ಕೆ ಇಂದಿನ ಬೆಳವಣಿಗೆಯೇ ಸಾಕ್ಷಿಯಾಗಿದೆ. 2005ರಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿ ಆಯ್ಕೆಯಾದ ದಿನದಿಂದ ಮೊನ್ನೆವರೆಗೂ ಕೂಡ ಜಾರಕಿಹೊಳಿ ಬ್ರದರ್ಸ್ ಒಬ್ಬರಲ್ಲಾ ಒಬ್ಬರು ಸಂಪುಟದಲ್ಲಿದ್ದರು.

ಇದೇ ಮೊದಲ ಬಾರಿಗೆ ಸಂಪುಟದಿಂದ ಜಾರಕಿಹೊಳಿ ಸೋದರರಿಗೆ ಕೊಕ್ ಕೊಟ್ಟಿದ್ದು, ಜಿಲ್ಲೆಯ ಜನರನ್ನು ಅಚ್ಚರಿಗೊಳಿಸಿದೆ. ಬಿಜೆಪಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿಗೆ ಈ ಮೂಲಕ ಶಾಕ್ ಕೊಟ್ಟಿದ್ದಾರೆ. ಇದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹೊಸ ತಿರುವು ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇದು ಜಾರಕಿಹೊಳಿ ಬ್ರದರ್ಸ್ ಹಣಿಯುವ ಪ್ರಯತ್ನ ನಡೆಯುತ್ತಿದೆ ಎಂಬ ನಿಟ್ಟಿನಲ್ಲೂ ವಿಶ್ಲೇಷಣೆ ನಡೆಯುತ್ತಿದೆ.

ಈ ವಿಶ್ಲೇಷಣೆ ಜೊತೆಗೆ ರಮೇಶ್ ಜಾರಕಿಹೊಳಿಗೆ ಮುಂದಿನ ದಿನಗಳಲ್ಲಿ ಸ್ಥಾನಮಾನ ನೀಡಬೇಕೆಂಬ ಉದ್ದೇಶದಿಂದ ಬಾಲಚಂದ್ರ ಜಾರಕಿಹೊಳಿ ಅವರನ್ನ ಕೈ ಬಿಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದೇನೇ ಇರಲಿ ಸದ್ಯದ ಮಟ್ಟಿಗೆ ಜಾರಕಿಹೊಳಿ ಬ್ರದರ್ಸ್ ನಿರೀಕ್ಷೆಗಳು ಹುಸಿಯಾಗಿ ಅವರನ್ನ ಬಿಟ್ಟು ಸರ್ಕಾರ ರಚನೆ ಮಾಡಬಹುದು ಎಂಬ ಸಂದೇಶ ಕೂಡ ರವಾನೆಯಾಗಿದೆ.

ರಾಜಕೀಯ ಮೇಲಾಟದಲ್ಲಿ ಯಾರನ್ನ ಯಾವಾಗ ಹೇಗೆ ಹತ್ತಿಕಲಾಗುತ್ತೆ, ಯಾರನ್ನ ಯಾವಾಗ ದಾಳವಾಗಿ ಬಳಸಿಕೊಳ್ಳಲಾಗುತ್ತೆ ಎಂಬುದು ಮಾತ್ರ ಗೊತ್ತಾಗುವುದಿಲ್ಲ. ಇಂತಹ ದಾಳಗಳನ್ನ ಉರುಳಿಸುತ್ತಾ ಸರ್ಕಾರದ ಮೇಲೆ ತಮ್ಮ ಹಿಡಿತ ಇಟ್ಟುಕೊಂಡು ಬಂದಿದ್ದ ಜಾರಕಿಹೊಳಿ ಬ್ರದರ್ಸ್ ಗೆ ಇಂದು ಚೆಕ್ ಮೆಟ್ ಕೊಟ್ಟು ಶಾಕ್ ನೀಡಿದ್ದು ಒಂದು ಹಂತದಲ್ಲಿ ಬ್ರದರ್ಸ್ ಶಕ್ತಿ ಕುಂದಿಸುವ ಕೆಲಸ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎನ್ನುವ ಚರ್ಚೆಗಳು ಆರಂಭಗೊಂಡಿವೆ.

Leave a Reply

Your email address will not be published. Required fields are marked *