Connect with us

Bengaluru City

ಅಪ್ಪ, ಮಕ್ಕಳು ಸೇರಿ ಕಾಂಗ್ರೆಸ್ ಹೆಸ್ರಿಲ್ಲದಂತೆ ಮಾಡ್ತಾರೆ- ಬಿಎಸ್‍ವೈ ನುಡಿದಿದ್ದ ಭವಿಷ್ಯ ವೈರಲ್

Published

on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಾಣುತ್ತಿರುವ ಬೆನ್ನಲ್ಲೇ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಈ ಹಿಂದೆ ಕಲಾಪದಲ್ಲಿ ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿದೆ.

ಕಲಾಪದ ವೇಳೆ ಮಾತನಾಡಿದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚತ್ತಾಪ ಪಡುವವರಿದ್ದೀರಿ. ಯಾವುದೋ ಮಾಡಬಾರದಂತಹ ಅಕ್ಷಮ್ಯ ಅಪರಾಧ ಮಾಡಿ ಎಲ್ಲರನ್ನು ರಕ್ಷಣೆ ಮಾಡಿ ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ ನೇತೃತ್ವವನ್ನು ವಹಿಸಿದಂತಹ ಖಳನಾಯಕ ನೀವೇ ಆಗಿದ್ದರಿಂದ ನಾನು ಹೇಳುತ್ತಿದ್ದೇನೆ ಎಂದಿದ್ದರು.

ಇದೇ ವೇಳೆ ರೀ ಸ್ವಾಮಿ ನಿಮ್ಮ ಬಗ್ಗೆ ಗೌರವವಿದೆ. ಇಂದು ನಾನು ಯಾವುದೇ ಮಾತನ್ನು ಹೇಳೋದಿಲ್ಲ. ಕಾಲನೇ ಎಲ್ಲ ಹೇಳುತ್ತದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿಯವರು, ಪಾಪ ನನಗೂ, ಯಡಿಯೂರಪ್ಪ ಅವರಿಗೂ ಸಂಬಂಧ, ಪ್ರೀತಿ, ವಿಶ್ವಾಸ ಇದೆ. ಆದರೆ ನಾನು ಖಳನಾಯಕ ಅನಿಸಿಕೊಳ್ಳಲು ನಾನು ತಯಾರಿಲ್ಲ. ರಾಹುಲ್ ಗಾಂಧಿಯವರ ತತ್ವ, ಆದೇಶದಂತೆ ನಾನು ನನ್ನ ಪಕ್ಷದ ಕಾರ್ಯವನ್ನು ಮಾಡಿದ್ದೇನೆ ಎಂದು ಖಳನಾಯಕ ಪದ ಬಳಕೆಯನ್ನು ಖಂಡಿಸಿದ್ದರು.

ಇದಕ್ಕೆ ದನಿಗೂಡಿಸಿದ ಬಿಎಸ್‍ವೈ, ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿರುವ ನಿಮ್ಮ ಬಗ್ಗೆ ಖಳನಾಯಕನನ್ನಾಗಿ ಮಾಡಲ. ಅಲ್ಲಿದ್ದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಅದೆಲ್ಲ ಅರ್ಥ ಆಗಬೇಕಲ್ವ. ನಿಮ್ಮನ್ನ ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಅನ್ನುವಂತಹ ಹೆಸರನ್ನು ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಸವಾಲೆಸೆದಿದ್ದರು.

ವನವಾಸ ಅನುಭವಿಸದಂತಹ ಕುಮಾರಸ್ವಾಮಿಯವರಿಗೆ ಸಿಟ್ಟು, ರೋಷ, ಮತ್ಸರ ಇದೋದು ಸ್ವಾಭಾವಿಕ. ಇವುಗಳು ಯಾವ ಪುರುಷಾರ್ಥಕ್ಕೋ ಏನೋ ಎಂಬೋದು ಅಪ್ಪ-ಮಕ್ಕಳಿಗಷ್ಟೇ ಗೊತ್ತಿರಬೇಕು. ನಾಗರ ಹಾವಿನ ರೋಷಕ್ಕೆ ಶಿವಕುಮಾರ್ ಅವರೇ 12 ವರ್ಷ ಆಯಸ್ಸಂತೆ. ಕುಮಾರಸ್ವಾಮಿಯವರ ರೋಷಕ್ಕೆ ನಾಗರ ಹಾವಿಗಿಂತಲೂ ಹೆಚ್ಚು ದೀರ್ಘಾಯಸ್ಸು ಇದೆ. ದುರ್ಯೋಧನ ಕುಮಾರಸ್ವಾಮಿಯವರ ಮನೆ ದೇವರಾಗಿರಬೇಕು. ಯಾಕಂದ್ರೆ ಆತನ ಲಾಂಛನ ನಾಗರ ಹಾವು. ವಿನಾಶವೇ ದುರ್ಯೋಧನನ ಸಂಕಲ್ಪ. ಅದೇ ರೀತಿ ಕುಮಾರಸ್ವಾಮಿಯವರಿಗೆ ಕೂಡ ವಿನಾಶಕಾರನ ಬಾಯಲ್ಲಿ ವಿಕಾಸದ ಮಂತ್ರಗಳನ್ನು ಕೇಳುವಂತದ್ದು, ಕೊಳ್ಳಿ ದೆವ್ವ ಭಗವದ್ಗೀತೆಯನ್ನು ಪಠಿಸಿದಂತೆ ಅನ್ನೋದು ನನ್ನ ಮಾತಾಗಿದೆ ಎಂದರು.

ಒಟ್ಟಿನಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಬಿಎಸ್‍ವೈ ನುಡಿದ ಭವಿಷ್ಯದ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಯಡಿಯೂರಪ್ಪ ತಪ್ಪು ಹೇಳಲ್ಲ ಎಂದು ಬರೆದುಕೊಂಡಿದೆ.