Connect with us

Latest

14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

Published

on

ಮನಿಲಾ: ತನ್ನ ತಂಗಿಯನ್ನು ತಿನ್ನಲು ಬಂದ 14 ಅಡಿ ಮೊಸಳೆಯಿಂದ ಅಣ್ಣನೋರ್ವ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ.

ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ತನ್ನ 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ ಮೇಲೆ ದಾಳಿ ಮಾಡಿದೆ.

ಹೈನಾ ಮತ್ತು ಹಾಶಿಮ್ ಇಬ್ಬರು ನದಿ ದಾಟುವಾಗ, ಹಾಶಿಮ್ ಬೇಗ ಮುಂದೆ ಹೋಗಿದ್ದಾನೆ. ಹೈನಾ ನಿಧಾನವಾಗಿ ಬರುತ್ತಿದ್ದ ವೇಳೆ ದಡ ಸಮೀಪಿಸಿದ ಹೈನಾಳ ಬಲಗಾಲನ್ನು ಮೊಸಳೆ ಜಿಗಿದು ಹಿಡಿದುಕೊಂಡಿದೆ. ಈ ವೇಳೆ ಕಿರುಚುತ್ತಿದ್ದ ತಂಗಿಯ ನೆರವಿಗೆ ಬಂದ ಅಣ್ಣ ಹಾಶಿಮ್ ಕಲ್ಲಿನಿಂದ ಮೊಸಳೆಯ ಬಾಯಿಗೆ ಹೊಡೆದು ನಂತರ ತನ್ನ ತಂಗಿಯನ್ನು ತನ್ನ ಕಡೆ ಎಳೆದುಕೊಂಡು ಮೊಸಳೆಯಿಂದ ಕಾಪಾಡಿದ್ದಾನೆ.

ಈ ವಿಚಾರದ ಬಗ್ಗೆ ಮಾತನಾಡಿರುವ ತಂಗಿ ಹೈನಾ, ಮೊಸಳೆ ನನಗಿಂತ ದೊಡ್ಡದಾಗಿತ್ತು. ನನಗೆ ಅದನ್ನು ನೋಡಿ ಭಯವಾಗಿತ್ತು. ಆದ್ದರಿಂದ ನಾನು ಭಯದಿಂದ ಅಳುತ್ತಿದ್ದೆ. ಅದು ನನ್ನ ಕಾಲನ್ನು ಹಿಡಿದುಕೊಂಡಿತ್ತು. ಆಗ ನನ್ನ ಸಹಾಯಕ್ಕೆ ಹಾಶಿಮ್ ಬಂದ ಅದರ ಬಾಯಿಗೆ ಕಲ್ಲಿನಿಂದ ಹೊಡೆದು ನನ್ನನ್ನು ಕಾಪಾಡಿದ ಎಂದು ಹೇಳಿದ್ದಾಳೆ.

ಈ ಘಟನೆಯಲ್ಲಿ ಹೈನಾಳ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಲೆಫ್ಟಿನೆಂಟ್ ಕರ್ನಲ್ ಸಾಕ್ರಟೀಸ್ ಫಾಲ್ಟಾಡೊ, ಈ ಭಾಗದ ನಿವಾಸಿಗಳಿಗೆ ಮೊಸಳೆಯಿಂದ ಇತ್ತೀಚೆಗೆ ಬಹಳ ತೊಂದರೆಯಾಗುತ್ತಿದೆ. ಮೊಸಳೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು. ಅವರ ಅಣ್ಣನ ಧೈರ್ಯದಿಂದ ಹುಡುಗಿ ಬದುಕಿ ಬಂದಿದ್ದಾಳೆ ಎಂದು ಹೇಳಿದ್ದಾರೆ.