Connect with us

Latest

ಸರ್ಕಾರದಿಂದ ವಧುವಿಗೆ 10 ಗ್ರಾಂ ಚಿನ್ನ – ಷರತ್ತುಗಳು ಅನ್ವಯ

Published

on

– ವಾರ್ಷಿಕ ಆದಾಯ 5 ಲಕ್ಷ ರೂ.ಒಳಗಿರಬೇಕು
– ಬಾಲ್ಯ ವಿವಾಹ ಆಗಿರಬಾರದು

ದಿಸ್ಪುರ್: ಮದುವೆ ನೋಂದಣಿ ಉತ್ತೇಜಿಸುವುದು ಹಾಗೂ ಬಾಲ್ಯವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಅಸ್ಸಾಂ ಸರ್ಕಾರ ‘ಅರುಂಧತಿ ಚಿನ್ನದ ಯೋಜನೆ’ಯನ್ನು ಜಾರಿಗೆ ತಂದಿದ್ದು, ಮುಂದಿನ ವರ್ಷದಿಂದ ಇದು ಕಾರ್ಯರೂಪಕ್ಕೆ ಬರಲಿದೆ.

ಈ ಯೋಜನೆಯಡಿ ಎಲ್ಲ ವಧುಗಳಿಗೆ 10 ಗ್ರಾಂ ಚಿನ್ನಕ್ಕೆ ತಗಲುವ ಮೊತ್ತವನ್ನು ಸರ್ಕಾರ ನೀಡಲಿದೆ. ಆದರೆ ಮದುವೆ ನೋಂದಣಿ ಸಮಯದಲ್ಲಿ ಚಿನ್ನ ಖರೀದಿಯ ರಶೀದಿಯನ್ನು ಫಲಾನುಭವಿಗಳು ನೀಡಬೇಕಾಗುತ್ತದೆ.

ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಮಾಹಿತಿ ನೀಡಿ, ಈ ಯೋಜನೆಯು ವಿವಾಹ ನೋಂದಣಿ ಉತ್ತೇಜಿಸುವುದು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಯೋಜನೆಯ ಲಾಭ ಪಡೆಯಲು ವಧು ಹಾಗೂ ಆಕೆಯ ತಂದೆಯ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎಂದು ವಿವರಿಸಿದರು.

ಅಲ್ಲದೆ ಫಲಾನುಭವಿ ವಧು-ವರರ ವಯಸ್ಸು ಕ್ರಮವಾಗಿ 18 ಹಾಗೂ 21 ವರ್ಷಗಳನ್ನು ಮೀರಿರಬೇಕು. 1954ರ ವಿಶೇಷ ವಿವಾಹ(ಅಸ್ಸಾಂ) ಕಾಯ್ದೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮದುವೆಯನ್ನು ಔಪಚಾರಿಕವಾಗಿ ನೋಂದಾಯಿಸಿಕೊಂಡ ನಂತರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮದುವೆ ಸಮಯದಲ್ಲೇ ಚಿನ್ನ ಕೊಳ್ಳಲು ಹಣ ನೀಡಲಾಗುವುದು ಎಂದು ಶರ್ಮಾ ತಿಳಿಸಿದರು.