ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ತಿಲಕ್ ನಗರದಲ್ಲಿ ನಡೆದಿದೆ.
ಅಂಕಿತ್ ಮೃತ ಯುವಕ. ಅಂಕಿತ್ ತನ್ನ ಮೊಬೈಲ್ನನ್ನು ರಿಪೇರಿ ಮಾಡಲು ಅಂಗಡಿಗೆ ಕೊಟ್ಟಿದ್ದನು. ಅದನ್ನು ತೆಗೆದುಕೊಂಡು ಬರಲು ಮಾರುಕಟ್ಟೆಗೆ ಹೋಗಿ ವಾಪಸ್ ಬರುತ್ತಿದ್ದನು. ಈ ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ರವಿ ಎಂಬಾತ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಹೇಳಿದ್ದಾನೆ. ಆಗ ಅಂಕಿತ್ ಮತ್ತು ರವಿ ಮಧ್ಯೆ ವಾಗ್ವಾದ ನಡೆದಿದೆ. ಇದೇ ವೇಳೆ ರವಿ ಸ್ನೇಹಿತರು ಸ್ಥಳಕ್ಕೆ ಬಂದಿದ್ದಾನೆ. ಆದರೆ ರವಿ ಸಾರ್ವಜನಿಕ ಸ್ಥಳದಲ್ಲಿಯೇ ಅಂಕಿತ್ಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಮೃತನ ಸಹೋದರ ತಡರಾತ್ರಿಯಾದರೂ ಅಂಕಿತ್ ಮನೆಗೆ ಬಾರದ್ದಕ್ಕೆ ಅವನನ್ನು ಹುಡುಕಾಡಿದ್ದಾನೆ. ತಿಲಕ್ ನಗರದಲ್ಲಿ ಜನರು ಗುಂಪೊಂದು ನಿಂತಿತ್ತು. ಅಲ್ಲಿ ಹೋಗಿ ನೋಡಿದಾಗ ತನ್ನ ಸಹೋದರ ಅಂಕಿತ್ಗೆ ಚಾಕುವಿನಿಂದ ಇರಿದಿದ್ದನ್ನು ನೋಡಿದ್ದಾನೆ. ತಕ್ಷಣ ಅಂಕಿತ್ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಅಷ್ಟರಲ್ಲಿ ಅಂಕಿತ್ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ.
ಅಂಕಿತ್ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸ್ಥಳದಿಂದ ಆರೋಪಿಯ ಮನೆ ಸ್ವಲ್ಪ ದೂರದಲ್ಲಿತ್ತು. ಆರೋಪಿ ರವಿ ಅದೇ ಪ್ರದೇಶದಲ್ಲಿ ಒಂದು ಅಂಗಡಿಯನ್ನೂ ಇಟ್ಟುಕೊಂಡಿದ್ದನು. ಸದ್ಯಕ್ಕೆ ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಸ್ನೇಹಿತರು ಭಾಗಿಯಾಗಿದ್ದಾರ ಎಂದು ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.