ಹೈದರಾಬಾದ್: ಆಂಧ್ರಪ್ರದೇಶದ ರಾಯದುರ್ಗಂನ ಅಪಾರ್ಟ್ಮೆಂಟ್ ಒಂದರಲ್ಲಿ 9 ವರ್ಷದ ಬಾಲಕನೋರ್ವ ಆಟವಾಡುತ್ತ ಲಿಫ್ಟ್ ಮಧ್ಯೆ ಸಿಲುಕಿ ಜಜ್ಜಿಹೋಗಿ ಸಾವನ್ನಪಿದ್ದಾನೆ.
ಭಾನುವಾರ ಈ ಘಟನೆ ನಡೆದಿದೆ. ಧನುಷ್(9) ಮೃತ ಬಾಲಕ. ರಾಯದುರ್ಗಂನ ಪಂಚವತಿ ಕಾಲೋನಿಯ ಅಪಾರ್ಟ್ಮೆಂಟ್ನಲ್ಲಿ ಬಾಲಕ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದನು. ಬಾಲಕ ತಂದೆ ಹೆಸರು ಶೇಷಾ ಭಟ್ಟಾಚಾರ್ಯ, ಧನುಷ್ ಸೇರಿ ಅವರಿಗೆ ಒಟ್ಟು 4 ಮಂದಿ ಮಕ್ಕಳು. ಧನುಷ್ ಮನೆ ಮೂರನೇ ಮಹಡಿಯಲ್ಲಿ ಇದೆ. ಆದರೆ ಬಾಲಕ ತನ್ನ ಸಹೋದರಿ ಜೊತೆಗೆ ಕಟ್ಟಡದ 4ನೇ ಮಹಡಿಯಲ್ಲಿ ಆಟವಾಡುತ್ತಿದ್ದನು.
Advertisement
Advertisement
ಈ ಕಟ್ಟಡದಲ್ಲಿದ್ದ ಲಿಫ್ಟ್ ನ ಬಾಗಿಲ ಬಳಿ ಹಾಕುವ ಸೇಫ್ಟಿ ಗ್ರಿಲ್ ಹಾಳಾಗಿತ್ತು. ಅದು ಸರಿಯಾಗಿ ಕಾರ್ಯನಿರ್ವಸುತ್ತಿರಲಿಲ್ಲ. ಈ ವೇಳೆ ಆಟವಾಡುತ್ತಿದ್ದ ಬಾಲಕ ಲಿಫ್ಟ್ ಹತ್ತಲು ಹೋಗಿದ್ದನು. ಲಿಫ್ಟ್ ಮೇಲಿನ ಮಹಡಿಯಲ್ಲಿದ್ದ ಕಾರಣ ಅದನ್ನು ನೋಡಲು ಹತ್ತಿರ ಹೋದ ಬಾಲಕ ಆಯಾತಪ್ಪಿ ಲಿಫ್ಟ್ ಕೆಳಗೆ ಇರುವ ಖಾಲಿ ಜಾಗಕ್ಕೆ ಬಿದ್ದಿದ್ದಾನೆ. ಆಗ ಆತನ ಸಹೋದರಿ ಸಹಾಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
ಬಾಲಕ ಬೀಳುತ್ತಿದ್ದಂತೆ ಲಿಫ್ಟ್ ಕೂಡ ಮೇಲಿಂದ ಕೆಳಗೆ ಬಂದಿದ್ದು. ಲಿಫ್ಟ್ ಮಧ್ಯೆ ಸಿಲುಕಿ ಬಾಲಕನ ದೇಹ ಜಜ್ಜಿಹೋಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
ಲಿಫ್ಟ್ ನ ಸೇಫ್ಟಿ ಗ್ರಿಲ್ ಸರಿಯಿಲ್ಲದ ಕಾರಣದಿಂದ ಈ ಅನಾಹುತ ನಡೆದಿದೆ. ಲಿಫ್ಟ್ ಅನ್ನು ಸರಿಯಾಗಿ ನಿರ್ವಹಿಸದ ಕಾರಣ ಒಂದು ಪುಟ್ಟ ಜೀವ ಬಲಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಈ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಹೀಗೆ ಲಿಫ್ಟ್ಗೆ ಸಿಲುಕಿ ಬಾಲಕ ಸಾವನ್ನಪ್ಪಿರುವುದು ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದೆ. ಈ ಹಿಂದೆ ಅಕ್ಟೋಬರ್ ತಿಂಗಳಲ್ಲಿ ಹಸ್ತಿನಾಪುರದಲ್ಲಿ 9 ವರ್ಷದ ಬಾಲಕಿ ಲಿಫ್ಟ್ಗೆ ಸಿಲುಕಿ ಮೃತಪಟ್ಟಿದ್ದಳು. ಹಾಗೆಯೇ ಫೆಬ್ರವರಿಯಲ್ಲಿ 10 ವರ್ಷದ ಬಾಲಕನೋರ್ವ ಬಾಲಾಜಿ ನಗರದಲ್ಲಿ ಲಿಫ್ಟ್ ಗ್ರಿಲ್ ಬಾಗಿಲಿಗೆ ಸಿಲುಕಿ ಸಾವನ್ನಪ್ಪಿದ್ದನು.