Connect with us

Crime

ಯೂಟ್ಯೂಬ್ ನೋಡಿ ಅಪ್ರಾಪ್ತನಿಂದ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್

Published

on

– ದ್ವಿತೀಯ ಪಿಯುನಲ್ಲಿ ಶೇ.80 ಅಂಕ ಪಡೆದಿದ್ದ ವಿದ್ಯಾರ್ಥಿ

ಮುಂಬೈ: ಅಪ್ರಾಪ್ತನೋರ್ವ ಯೂಟ್ಯೂಬ್ ವಿಡಿಯೋ ನೋಡಿ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್ ಮಾಡಿದ್ದು, ಗ್ರಾಹಕರು ಕೆಫೆಗೆ ಪಾವತಿಸುವ ಹಣವನ್ನು ತನ್ನ ಖಾತೆಗೆ ಬರುವಂತೆ ಮಾಡುತ್ತಿದ್ದ ಪ್ರಕರಣ ಮುಂಬೈನಲ್ಲಿ ನಡೆದಿದೆ.

17 ವರ್ಷದ ವಿದ್ಯಾರ್ಥಿ ಯೂಟ್ಯೂಬ್ ವಿಡಿಯೋ ನೋಡಿ ಈ ಕೃತ್ಯ ಎಸಗಿದ್ದು, ಬಾಲಾಪರಾಧಿ ನ್ಯಾಯಾಲಯ ಎರಡು ವರ್ಷಗಳ ಕಾಲ ಕೌನ್ಸಲಿಂಗ್‍ಗೆ ಒಳಪಡಿಸುವಂತೆ ಸೂಚಿಸಿದೆ. ವಿದ್ಯಾರ್ಥಿ 12ನೇ ತರಗತಿಯಲ್ಲಿ ಶೇ.80ರಷ್ಟು ಅಂಕ ಗಳಿಸಿ ಉತ್ತೀರ್ಣನಾದ ಬಳಿಕ ಚಾರ್ಟೆಡ್ ಅಕೌಂಟೆನ್ಸಿ ಮಾಡುತ್ತಿದ್ದಾನೆ. ಸೆಪ್ಟೆಂಬರ್ 28ರಂದು ಕಾಫೀ ಶಾಪ್ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಕಾಫಿ ಕುಡಿದ ಬಳಿಕ ಶಾಪ್‍ನಿಂದ ಗ್ರಾಹಕರಿಗೆ ಮೆಂಬರ್‍ಶಿಪ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಬಳಸಿ ಗ್ರಾಹಕರು ಏನಾದರೂ ಕೊಳ್ಳಬಹುದು, ಇಲ್ಲವೆ ರಿವಾರ್ಡ್ ಪಡೆಯಬಹುದಾಗಿದೆ. ಕಾರ್ಡ್ ಬಳಸದಿದ್ದರೂ ಹಣ ಖಾಲಿಯಾಗಿರುವುದನ್ನು ಕಂಡ ಗ್ರಾಹಕರು ಕಾಫೀ ಶಾಪ್ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಬಳಿಕ ಮಾಲೀಕ ತನ್ನ ಪೇಮೆಂಟ್ ಸಿಸ್ಟಮ್ ಪರಿಶೀಲಿಸಿದ್ದಾರೆ. ಅಲ್ಲದೆ ಇತರ ಗ್ರಾಹಕರನ್ನು ವಿಚಾರಿಸಿದ್ದಾರೆ. ಅವರೂ ಸಹ ಇದೇ ರೀತಿಯ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಬಳಿಕ ಮಾಲೀಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಐಪಿ ಅಡ್ರೆಸ್ ಟ್ರೇಸ್ ಮಾಡಿದ್ದು, ಒಡಿಶಾ ಎಂದು ತಿಳಿದಿದೆ. ಆದರೆ ಅದೂ ಸಹ ಸುಳ್ಳಾಗಿತ್ತು. ನಂತರ ಪೊಲೀಸರು ಟೆಕ್ನಿಕಲ್ ಸರ್ವಲೆನ್ಸ್ ಮೂಲಕ ಆತನ ಮನೆಯನ್ನು ಪತ್ತೆ ಹಚ್ಚಿದರು. ಆದರೆ 36 ಫ್ಲ್ಯಾಟ್‍ಗಳಲ್ಲಿ ಆರೋಪಿ ವಾಸಿಸುತ್ತಿರುವುದು ಯಾವ ಮನೆ ಎಂದು ಪೊಲೀಸರಿಗೆ ತಿಳಿಯಲಿಲ್ಲ.

ಪೊಲೀಸರು ನಾಲ್ಕು ದಿನಗಳ ಕಾಲ ಫ್ಲ್ಯಾಟ್ ಬಳಿ ಕ್ಯಾಂಪ್ ಹಾಕಿ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಬಳಿಕ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿ ಕೆಫೆಯ ಪೇಮೆಂಟ್ ಸಿಸ್ಟಮ್ ಹ್ಯಾಕ್ ಮಾಡಿರುವುದು ಈ ವೇಳೆ ಬೆಳಕಿಗೆ ಬಂದಿದೆ.

ಡಿಸಿಪಿ ರಶ್ಮಿ ಕರಂದಿಕರ್ ಈ ಕುರಿತು ಮಾಹಿತಿ ನೀಡಿದ್ದು, ಬಾಲಕ ಮಧ್ಯಮ ವರ್ಗದ ಕುಟುಂಬದವನಾಗಿದ್ದು, ಅವರು ವಾಸಿಸುತ್ತಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ ತಕ್ಷಣ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಮಗ ಈ ರೀತಿಯ ಕೆಲಸ ಮಾಡಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಡಾರ್ಕ್ ವೆಬ್ ಬಗ್ಗೆ ಜ್ಞಾನ ಹೊಂದಿದ್ದ ಬಾಲಕ, ಅಂತರ್ಜಾಲದ ಮೂಲಕ ಹೆಸರು ಮರೆಮಾಚಿ, ನಕಲಿ ಸಿಮ್ ಕಾರ್ಡ್ ಬಳಸಿ ಯಾಮಾರಿಸಿದ್ದಾನೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in