Connect with us

International

ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್- 52 ಕೋಟಿ ಬೆಲೆ, ವಿಶೇಷತೆ ಏನು ಗೊತ್ತಾ?

Published

on

ರೋಮ್: ಇಟಲಿಯ ಐಷಾರಾಮಿ ವಸ್ತುಗಳ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಪರಿಚಯಿಸಿದ್ದು, ಇದರ ಬೆಲೆ ಬರೋಬ್ಬರಿ 52 ಕೋಟಿ ರೂ. ಆಗಿದೆ.

ಬೊಲುಗ್ನಾ ಮೂಲದ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ಕೇವಲ ಮೂರು ಐಷಾರಾಮಿ ಪರ್ವಾ ಮೀ ಬ್ಯಾಗ್‍ಗಳನ್ನು ಉತ್ಪಾದಿಸಿದೆ. ಪ್ರತಿ ಬ್ಯಾಗ್ ತಯಾರಿಸಲು 1 ಸಾವಿರ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ವರದಿಯಾಗಿದೆ. ಈ ಬ್ಯಾಗ್ ಕುರಿತು ಬೋರಿನಿ ಮಿಲನೇಸಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಬ್ಯಾಗ್ ಮಾರಾಟದಿಂದ ಬಂದ ಆದಾಯದಲ್ಲಿ ಒಂದು ಭಾಗವನ್ನು ಸಮುದ್ರ ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನವಾಗಿ ನೀಡಲಾಗುವುದು ಎಂದು ಘೋಷಿಸಿದೆ.

6 ಮಿಲಿಯನ್ ಯೂರೋ (52 ಕೋಟಿ ರೂ.) ಬೆಲೆ ಬಾಳುವ ಬ್ಯಾಗ್‍ನ್ನು ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ವಿಶ್ವದ ಅತ್ಯಂತ ಬೆಲೆ ಬಾಳುವ ಬ್ಯಾಗ್ ಎಂಬುದು ಮತ್ತೊಂದು ವಿಶೇಷ. ಪ್ಲಾಸ್ಟಿಕ್‍ನಿಂದ ಮಲಿನವಾಗುತ್ತಿರುವ ಸಮುದ್ರವನ್ನು ರಕ್ಷಿಸಬೇಕಿದ್ದು, ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬ್ಯಾಗ್ ತಯಾರಿಸಲಾಗಿದೆ. ಈ ಪೈಕಿ 800 ಸಾವಿರ ಯೂರೋಗಳನ್ನು ಸಮುದ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನ ನೀಡಲಾಗುತ್ತಿದೆ ಎಂದು ಸಂಸ್ಥೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದೆ.

 

View this post on Instagram

 

A post shared by BOARINI MILANESI (@boarinimilanesi)

ಬ್ಯಾಗ್ ಸೆಮಿ ಶೈನಿ ಅಲಿಗೇಟರ್ ಹೊದಿಕೆ ಹೊಂದಿದ್ದು, 10 ಬಿಳಿ ಚಿನ್ನದ ಚಿಟ್ಟೆಗಳು ಹಾಗೂ ವಜ್ರದ ಕೊಕ್ಕೆಗಳಿಂದ ಬ್ಯಾಗ್ ಮೇಲ್ಭಾಗದಲ್ಲಿ ಅಲಂಕರಿಸಲಾಗಿದೆ. 10 ಚಿಟ್ಟೆಗಳಲ್ಲಿ ನಾಲ್ಕು ವಜ್ರ ಹಾಗೂ ಮೂರು ನೀಲಮಣಿ ಹಾಗೂ ಅಪರೂಪದ ಪ್ಯಾರೈಬಾ ಟೂರ್‍ಮ್ಯಾಲೈನ್‍ಗಳಿಂದ ಅಲಂಕರಿಸಲಾಗಿದೆ. ಸಮುದ್ರದಿಂದ ಪ್ರೇರಿತಗೊಂಡು ನೀಲಿ ಬಣ್ಣದಲ್ಲಿ ಚೀಲವನ್ನು ವಿನ್ಯಾಸ ಮಾಡಲಾಗಿದ್ದು, ಕಲ್ಲುಗಳ ಆಕಾರದ ಡಿಸೈನ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೋರಿನಿ ಮಿಲನೇಸಿ ಸಹ-ಸಂಸ್ಥಾಪಕ ಮ್ಯಾಟಿಯೊ ರೊಡಾಲ್ಫೊ ಮಿಲನೇಸಿ ಅವರು ತಮ್ಮ ತಂದೆಯ ನೆನಪಿನ ಗೌರವಾರ್ಥವಾಗಿ ಇದನ್ನು ಸಮರ್ಪಿಸಿದ್ದಾರೆ.

ಬ್ಯಾಗ್ ವಿನ್ಯಾಸಕರಾದ ಕೊರೊಲಿನಾ ಬೋರಿನಿ ಈ ಕುರಿತು ಮಾಹಿತಿ ನೀಡಿ, ನೀಲಮಣಿಗಳು ಸಾಗರದ ಆಳವನ್ನು ಪ್ರತಿನಿಧಿಸುತ್ತವೆ. ಪ್ಯಾರೈಬಾ ಟೂರ್ ಮ್ಯಾಲಿನ್ ಅಸಂಖ್ಯಾತ ಕೆರಿಬಿಯನ್ ಸಮುದ್ರಗಳನ್ನು ನೆನಪಿಸುತ್ತವೆ. ಅಲ್ಲದೆ ವಜ್ರಗಳು ನೀರಿನ ಪಾರದರ್ಶಕತೆಯನ್ನು ಬಿಂಬಿಸುತ್ತವೆ ಎಂದು ವಿವರಿಸಿದ್ದಾರೆ. ಬೋರಿನಿ ಮಿಲನೇಸಿ ಕಂಪನಿಯನ್ನು 2016ರಲ್ಲಿ ಇಟಲಿಯಲ್ಲಿ ಸ್ಥಾಪಿಸಲಾಗಿದ್ದು, ಐಶಾರಾಮಿ ವಸ್ತುಗಳನ್ನು ಉತ್ಪಾದಿಸುತ್ತದೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಈಗಿನ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಮೌವಾಡ್ ಆಗಿದ್ದು, ಇದು ಹೃದಯದಾಕಾರದಲ್ಲಿದೆ. 1001 ನೈಟ್ಸ್ ಡೈಮಂಡ್ ಪರ್ಸ್, 18 ಕ್ಯಾರೆಟ್ ಚಿನ್ನದಿಂದ ಇದನ್ನು ಮಾಡಲಾಗಿದೆ. 4,517 ವಜ್ರಗಳನ್ನು ಹೊಂದಿದೆ.

Click to comment

Leave a Reply

Your email address will not be published. Required fields are marked *

www.publictv.in