Connect with us

Bollywood

ಜೈಲು ವಾಸ ಅನುಭವಿಸಿದ ಬಾಲಿವುಡ್ ಸ್ಟಾರ್​​​​ಗಳು

Published

on

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತವಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಬೈಖಲಾ ಜೈಲಿನಲ್ಲಿದ್ದಾರೆ. ಬಂಧಿತರನ್ನು ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ನೀಡಿದೆ. ಇತ್ತ ಚಂದವನದ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರಗ್ಸ್ ಕೇಸ್‍ನಲ್ಲಿ ಇಬ್ಬರು ನಟಿಯರು ಅರೆಸ್ಟ್ ಆಗಿ, ವಿಚಾರಣೆ ಎದುರಿಸುತ್ತಿದ್ದಾರೆ. ಬಾಲಿವುಡ್ ನಲ್ಲಿ ಈ ಹಿಂದೆ ಹಲವು ನಟರು ಜೈಲುವಾಸ ಅನುಭವಿಸಿದ್ದಾರೆ.

1. ಸಂಜಯ್ ದತ್: 90ರ ದಶಕದ ವೇಳೆ ಮುಂಬೈನಲ್ಲಿ ನಡೆದ ಸರಣಿ ಸ್ಫೋಟದ ಸಮಯದಲ್ಲಿ ಕಾನೂನು ಬಾಹಿರವಾಗಿ ಶಸ್ತಾಸ್ತ್ರ ಸಂಗ್ರಹಿಸಿದ ಆರೋಪ ಸಾಬೀತಾದ ಹಿನ್ನೆಲೆ ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಜೈಲು ಶಿಕ್ಷೆ ಅನುಭವಿಸಿದ ಸಂಜಯ್ ದತ್ ಫೆಬ್ರವರಿ 2016ರಂದು ರಿಲೀಸ್ ಆಗಿದ್ರು. ಜೈಲಿನಿಂದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಶಮ್‍ಶೇರ್, ಬ್ರಹ್ಮಾಸ್ತ್ರ, ಕೆಜಿಎಫ್-ಚಾಪ್ಟರ್ 2, ಪೃಥ್ವಿರಾಜ್, ಭುಜ್ ಮತ್ತು ತೋರ್‍ಬಾಜ್ ಸೇರಿದಂತೆ ಹಲವು ಸಿನಿಮಾಗಳು ಸಂಜು ಬಾಬಾ ಕೈಯಲ್ಲಿವೆ. ಇನ್ನು ಸಂಜಯ್ ದತ್ ಜೀವನಾಧರಿತ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ದಾಖಲೆ ಬರೆದಿತ್ತು.

2. ಫರ್ದಿನ್ ಖಾನ್: ಲೆಜೆಂಡರಿ ಆ್ಯಕ್ಟರ್ ಫಿರೋಜ್ ಖಾನ್ ಪುತ್ರ ಫರ್ದಿನ್ ಖಾನ್ 1998ರಲ್ಲಿ ‘ಪ್ರೇಮ್ ಅಗನ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರರಂಗಕ್ಕೆ ಬಂದ ಫರ್ದಿನ್ ಖಾನ್ ವಿರುದ್ಧ ಕೋಕೆನ್ ಸರಬರಾಜು ಮಾಡಿರೋ ಆರೋಪಗಳು ಕೇಳಿ ಬಂದಿದ್ದವು. ಆರೋಪ ಸಾಬೀತಾದ ಹಿನ್ನೆಲೆ ಜೈಲುವಾಸ ಅನುಭವಿಸಿದ್ದಾರೆ. ಜೈಲಿನಿಂದ ಬಂದ ಫರ್ದಿನ್ ಖಾನ್‍ನಿಂದ ಸಿನಿಮಾ ಲೋಕ ಅಂತರ ಕಾಯ್ದುಕೊಂಡಿದ್ದರಿಂದ ಬಣ್ಣದ ಬದುಕು ಅಂತ್ಯವಾಗಬೇಕಾಯ್ತು. 2010ರಲ್ಲಿ ಬಿಡುಗಡೆಗೊಂಡಿದ್ದ ‘ದುಲ್ಹಾ ಮಿಲ್ ಗಯಾ’ ಕೊನೆಯ ಚಿತ್ರವಾಗಿದ್ದು, ಅಂದಿನಿಂದ ರಂಗೀನ್ ದುನಿಯಾದಿಂದ ಫರ್ದಿನ್ ದೂರ ಉಳಿದುಕೊಂಡಿದ್ದಾರೆ.

3. ಜಾನ್ ಅಬ್ರಾಹಂ: ಬಿಟೌನ್ ಲೋಕದ ಮೋಸ್ಟ್ ಹ್ಯಾಂಡ್‍ಸಮ್ ನಟ ಜಾನ್ ಅಬ್ರಾಹಂ ಸೆರೆಮನೆ ವಾಸದ ಅನುಭವ ಹೊಂದಿದ್ದಾರೆ. 2006ರಲ್ಲಿ ಜಾನ್ ಬೈಕ್ ನಲ್ಲಿ ಹೋಗ್ತಿರುವಾಗ ಸೈಕಲ್‍ಗೆ ಡಿಕ್ಕಿ ಹೊಡೆದಿದ್ರು. ಸೈಕಲ್ ಸವಾರರಿಬ್ಬರು ಗಾಯಗೊಂಡಿದ್ದರು. ಅಜಾಗರೂಕತೆ ಚಾಲನೆ ಹಿನ್ನೆಲೆ ಜಾನ್‍ಅಬ್ರಾಹಂ 15 ದಿನ ಜೈಲಿನಲ್ಲಿದ್ರು. ಈ ಘಟನೆ ಜಾನ್ ಅಬ್ರಾಹಂ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿಲ್ಲ. ಇಂದಿಗೂ ಸಿನಿಮಾ ಅಂಗಳದಲ್ಲಿ ಜಾನ್ ಅಬ್ರಾಹಂ ಆ್ಯಕ್ಟೀವ್ ಆಗಿದ್ದಾರೆ.

4. ಸಲ್ಮಾನ್ ಖಾನ್: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಮತ್ತು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಕೆಲ ಸಮಯ ಜೈಲಿನಲ್ಲಿ ಕಳೆದಿದ್ದಾರೆ. ವೈಯಕ್ತಿಯ ಬದುಕಿನ ಅವಾಂತರಗಳು ಸಲ್ಮಾನ್ ಖಾನ್ ಪ್ರೊಫೆಷನ್ ಮೇಲೆ ಎಫೆಕ್ಟ್ ಆಗಿಲ್ಲ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆದ್ರೆ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ.

5. ಶಾಹಿನ್ ಅಹುಜಾ: 2005ರಲ್ಲಿ ‘ಹಜಾರೋ ಕ್ವಾಹಿಶ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದ ಶಾಹಿನ್ ಅಹುಜಾ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. 2009ರಲ್ಲಿ ಮನೆಯ ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿದೆ. ಆರಂಭದಲ್ಲಿಯೇ ಜೈಲು ಸೇರಿದ ಪರಿಣಾಮ ಶಾಹಿನ್ ಸಿನಿಮಾ ಜೀವನ ಅಂತ್ಯವಾಗಿದೆ.

6. ಸೂರಜ್ ಪಾಂಚೋಲಿ: ಹಿರಿಯ ನಟ ಆದಿತ್ಯಾ ಪಾಂಚೋಲಿ ಪುತ್ರ ಸೂರಜ್ ಪಾಂಚೋಲಿ ಸಿನಿಮಾಗಳಿಗಿಂದ ವಿವಾದಗಳಿಂದಲೇ ಸುದ್ದಿಯಾದ ನಟ. ಜಿಯಾ ಖಾನ್ ಸೂಸೈಡ್ ಕೇಸ್‍ನಲ್ಲಿ ಸೂರಜ್ ವಿರುದ್ಧ ಅನುಮಾನಗಳು ಹುಟ್ಟಿಕೊಂಡಿದ್ದವು. ಸೂರಜ್ 2015ರಲ್ಲಿ ಫಿಲಂ ಕೆರಿಯರ್ ಆರಂಭಿಸಿದ್ದು, ಸದ್ಯ ಕೆಲ ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕೆಲವರು ಜೈಲಿನಿಂದ ಬಂದ ಬಳಿಕವೂ ತಮ್ಮ ಫೇಮ್ ಉಳಿಸಿಕೊಂಡಿದ್ದು, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತವರು ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ರೆ, ಉಳಿದವರು ಒಂದು ಕ್ಲಿಕ್ ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಇನ್ನು 28 ವರ್ಷದ ರಿಯಾ ಚಕ್ರವರ್ತಿ ವೃತ್ತಿ ಬದುಕಿನಲ್ಲಿ ಸುಶಾಂತ್ ಸಿಂಗ್ ಮತ್ತು ಡ್ರಗ್ಸ್ ಕೇಸ್ ಕಪ್ಪು ಚುಕ್ಕೆಯಾಗಿ ಉಳಿಯದಂತೋ ಸತ್ಯ.

Click to comment

Leave a Reply

Your email address will not be published. Required fields are marked *