Sunday, 20th January 2019

ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ನಾಲ್ವರೂ ಮೃತಪಟ್ಟಿದ್ದಾರೆ: ಸುಷ್ಮಾ ಸ್ವರಾಜ್

ವಾಷಿಂಗ್ಟನ್: ಅಮೆರಿಕದ ಈಲ್ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಕುಟುಂಬದ 4 ಸದಸ್ಯರಲ್ಲಿ ಸೋಮವಾರ ಮೂವರ ಶವ ಮಾತ್ರ ಪತ್ತೆಯಾಗಿತ್ತು. ಈಗ, ನಾಲ್ವರ ಶವವೂ ದೊರೆತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಗುಜರಾತ್ ರಾಜ್ಯದ ಸೂರತ್ ಮೂಲದ ಸಂದೀಪ್ ತೊಟ್ಟಪಿಲ್ಲಿ, ಪತ್ನಿ ಸೌಮ್ಯ ಹಾಗೂ ಅವರ ಮಗಳು ಸಾಚಿ ಶವ ಮಾತ್ರ ಪತ್ತೆಯಾಗಿತ್ತು. ಇದೀಗ ಸಿದ್ಧಾಂತ್ (12) ಅವರ ಶವ ಕೂಡ ಪತ್ತೆಯಾಗಿದೆ. ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಸಂದೀಪ್ ಲಾಸ್ ಏಂಜಲೀಸ್ ನಲ್ಲಿ ವಾಸವಿದ್ದರು. ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು.

ಸಂದೀಪ್ ತೊಟ್ಟಪಿಲ್ಲಿ, ಪತ್ನಿ ಸೌಮ್ಯ ಹಾಗೂ ಅವರ ಇಬ್ಬರು ಮಕ್ಕಳ ಸಾವಿಗೆ ಸುಷ್ಮಾ ಸ್ವರಾಜ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬದವರು ಅಮೆರಿಕಗೆ ಹೋಗಿಬರಲು ವೀಸಾ ಒದಗಿಸಲು ಸಹಕರಿಸುವುದಾಗಿ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳು ಈಲ್ ನದಿ ಬಳಿ ಏಪ್ರಿಲ್ 8 ರಂದು ಕಾಣೆಯಾಗಿದ್ದರು. ಕಳೆದ ವಾರ ಸ್ಯಾನ್ ಜೋಸ್ ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಂದೀಪ್ ಕುಟುಂಬ 2016ರ ಮಾಡೆಲ್ ಕಡುಕೆಂಪು ಬಣ್ಣದ ಹೋಂಡಾ ಪೈಲಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಏಪ್ರಿಲ್ 8 ರಂದು ಸ್ಯಾನ್ ಜೋಸ್ ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದ್ದ ಸಂದೀಪ್ ಭೇಟಿ ಮಾಡಿರಲಿಲ್ಲ. ಒರೆಗಾನ್ ನಿಂದ ಕ್ಯಾಲಿಫೋರ್ನಿಯ ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಕುಟುಂಬ ಕಾಣೆಯಾದ ಬಗ್ಗೆ ವರದಿಯಾಗಿತ್ತು. ಕ್ಲಾಮತ್ ರೆಡ್ವುಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಕುಟುಂಬ ಕೊನೆಯದಾಗಿ ಫೋಟೋ ತೆಗೆದಿತ್ತು ಎಂದು ಸಂದೀಪ್ ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದರು.

Leave a Reply

Your email address will not be published. Required fields are marked *