Tuesday, 25th February 2020

Recent News

ಬಿರುಕು ಮೂಡಿದ್ದು ಯಾಕೆ? ಸಮಸ್ಯೆ ಹೇಗೆ ಪರಿಹರಿಸಲಾಗುತ್ತದೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮೆಟ್ರೋ ಎಂಡಿ ಅಜಯ್ ಸೇಠ್

ಬೆಂಗಳೂರು: ನಮ್ಮ ಮೆಟ್ರೋ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಪ್ರಯಾಣಿಕರು ಈ ಬಗ್ಗೆ ಯಾವುದೇ ಅನುಮಾನ ಪಡುವುದು ಬೇಡ. ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಭರವಸೆ ನೀಡಿದ್ದಾರೆ.

ಟ್ರಿನಿಟಿ ವೃತ್ತ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ಮೂಡಿದ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರಿಗೆ ಯಾವುದೇ ಆತಂಕ ಬೇಡ. ಮೆಟ್ರೋ ಸಂಚಾರ ಸುರಕ್ಷಿತವಾಗಿದೆ. ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ವಯಾಡಕ್ಟ್ ಭಾಗದಲ್ಲಿ ಗ್ಯಾಪ್ ಇರುವ ಬಗ್ಗೆ ಸುದ್ದಿಯಾಗುತ್ತಿದೆ. ಅಲ್ಲದೇ ಅದರ ಡಿಸೈನ್ ಮಾಡಿರುವುದೇ ಹಾಗೇ. ಇದು ಸಾಮಾನ್ಯವಾಗಿರುವಂತಹದ್ದು ಎಂದು ತಿಳಿಸಿದರು.

ಹನಿಕಾಂಬ್(ಕಾಂಕ್ರೀಟ್ ಪದರ ಟೊಳ್ಳಾಗುವುದನ್ನು ಸಿವಿಲ್ ಎಂಜಿನಿಯರಿಂಗ್ ಭಾಷೆಯಲ್ಲಿ ಹನಿಕಾಂಬ್ ಎಂದು ಕರೆಯಲಾಗುತ್ತದೆ) ಸಮಸ್ಯೆಯಿಂದ ಕಾಂಕ್ರಿಟ್ ಸಿಮೆಂಟ್ ಟೊಳ್ಳಾಗಿದೆ. ನಮ್ಮ ಪರಿಶೀಲನೆ ವೇಳೆ ಗೊತ್ತಾಗಿದೆ. ಪಿಲ್ಲರ್‍ಗೆ ಇಂದು ರಾತ್ರಿ ಮತ್ತೆ ಹೆಚ್ಚುವರಿಯಾಗಿ ಸಪೋರ್ಟ್ ಆಗಿ ಕಬ್ಬಿಣದ ಸರಳನ್ನು ಅಳವಡಿಸಲಿದ್ದೇವೆ. ಇದು ಮುನ್ನೆಚ್ಚರಿಕಾ ಕ್ರಮವಾಗಿ ಮಾತ್ರವೇ ಅಳವಡಿಸುತ್ತಿರುವುದು. ಹೆಚ್ಚುವರಿಯಾಗಿ ಕಬ್ಬಿಣದ ಸರಳನ್ನು ಸಪೋರ್ಟ್ ಕೊಟ್ಟಿದ್ದೇವೆಂದರೆ, ಮೆಟ್ರೋ ಅನ್ ಸೇಫ್ ಎಂದಲ್ಲ. ಇಂದಿನಿಂದ ನಾರ್ಮಲ್ ಆಪರೇಷನ್ ಶುರುವಾಗಿದೆ ಎಂದರು.

ರಾತ್ರಿ ಮೆಟ್ರೋ ಕಾಮಗಾರಿ ನಡೆಸುತ್ತೇವೆ. ಕ್ರಾಸ್ ಬೀಮ್ ನಲ್ಲಿ ಅಲ್ಟ್ರಾಸೋನಿಕ್ ಟೆಸ್ಟ್ ಮಾಡಿದ್ದೇವೆ. ಈಗಾಗಲೇ ಕೆಮಿಕಲ್ ಮಿಶ್ರಿತ ಜೆಲ್ ಕೂಡ ಹಾಕಿದ್ದೇವೆ. ಈಗ ಕಂಪ್ಲೀಟ್ ಆಗಿ ಕೆಲಸದ ಬಗ್ಗೆ ಅಂತಿಮ ರೂಪುರೇಷೆ ಸಿದ್ಧಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅನುಭವಿ ತಜ್ಞರ ಬಳಿ ಈ ಬಗ್ಗೆ ಮಾತನಾಡಿದ್ದೇವೆ. ಇನ್ನು ನಾಲ್ಕೈದು ದಿನಗಳಲ್ಲಿ ಆಕ್ಷನ್ ಪ್ಲಾನ್ ರೆಡಿಯಾಗಲಿದೆ. ಅನುಭವಿ ತಜ್ಞರಿಂದಲೇ ಅಂತಿಮ ದುರಸ್ತಿ ಕಾರ್ಯ ಮಾಡಿಲಿದ್ದೇವೆ ಎಂದು ವಿವರಿಸಿದರು.

ಈಗ ಪೂರ್ವ ಸಿದ್ಧತೆಯಷ್ಟೇ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ದುರಸ್ತಿ ಕಾರ್ಯ ನಡೆಸಲು ಸಜ್ಜಾಗಿದ್ದೇವೆ. ವೀಕೆಂಡ್‍ನಲ್ಲಿ ಅಂತಿಮ ದುರಸ್ತಿ ಕಾರ್ಯ ನಡೆಸುತ್ತೇವೆ. ರಸ್ತೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪಿಲ್ಲರ್ ಭಾಗದಲ್ಲಿ ಹೋಗುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಕಾಂಕ್ರೀಟ್ ನಲ್ಲಿ ಸಣ್ಣ ಸಣ್ಣ ರಂಧ್ರಗಳಾಗಿವೆ. ಆ ಗ್ಯಾಪನ್ನು ಫಿಲ್ ಮಾಡಬೇಕಾಗಿದೆ. ಒಂದು ದಿನ ಅಥವಾ ಎರಡು ದಿನ ಮೆಟ್ರೋ ಬಂದ್ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಶನಿವಾರ ಹಾಗೂ ಭಾನುವಾರ ಮೆಟ್ರೋ ಸ್ಥಗಿತಗೊಳ್ಳುವುದಿಲ್ಲ. ಮುಂದಿನ ಶನಿವಾರ ಹಾಗೂ ಭಾನುವಾರ ಮಾತ್ರ ಮೆಟ್ರೋ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತೇವೆ. ಮೆಟ್ರೋ ಸ್ಥಗಿತಗೊಂಡರೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದರಲ್ಲಿ ಮೆಟ್ರೋ ದರದಲ್ಲಿ ಬಸ್ ದರವೂ ಸೇರಲಿದ್ದು, ಎಂಜಿ ರೋಡ್‍ನಿಂದ ಇಂದಿರಾನಗರದ ಫೀಡರ್ ಬಸ್ ಸರ್ವೀಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಾರ್ಗದಲ್ಲಿ ಬಿಎಂಟಿಸಿಯಿಂದ ಶಟಲ್ ಬಸ್ ಸೇವೆ ಮೆಟ್ರೋ ಪ್ರಯಾಣಿಕರಿಗೆ ಮಾತ್ರವೇ ಉಚಿತವಾಗಿರಲಿದೆ ಅಜಯ್ ಸೇಠ್ ಹೇಳಿದರು.

ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಮೆಟ್ರೋ ಅಧಿಕಾರಿಗಳ ವಾಟ್ಸಪ್ ಗ್ರೂಪ್ ನಲ್ಲಿ ಹರಿದಾಡಿದ್ದ ಬೇರಿಂಗ್ ಕ್ರ್ಯಾಕ್ ಕುರಿತು ಪ್ರಶ್ನಿಸಿದಾಗ, ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಾಟ್ಸಪ್ ಸ್ಕ್ರೀನ್ ಶಾಟ್ಸ್ ಗಳು ನಮ್ಮ ಅಧಿಕಾರಿಗಳದ್ದಲ್ಲ. ಅಲ್ಲದೇ ತಪ್ಪು ಮಾಡಿದ ಎಂಜಿನಿಯರ್ ಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.

ನಮಗೆ ಬೆಂಗಳೂರು ಜನರ ಸುರಕ್ಷತೆ ಮಾತ್ರ ಮುಖ್ಯ. ಎಂಜಿನಿಯರ್ ಮೇಲೆ ಕ್ರಮ ಕೈಗೊಳ್ಳುವ ಸಮಯ ಇದಲ್ಲ. ಮೊದಲು ನಾವು ದುರಸ್ತಿ ಕಾರ್ಯದತ್ತ ಗಮನ ಹರಿಸುತ್ತಿದ್ದೇವೆ. ಟ್ರಿನಿಟಿ-ಬೈಯಪ್ಪನಹಳ್ಳಿ ಕಡೆಯಿಂದ 10 ಕಿ.ಮೀ.ವೇಗ ಹಾಗೂ ಬೈಯಪ್ಪನಹಳ್ಳಿ-ಟ್ರಿನಿಟ್ ಮಾರ್ಗದಲ್ಲಿ ಮೆಟ್ರೋ 30 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಈಗಾಗಲೇ ದೆಹಲಿ ಟೀಮ್ ಕೂಡ ಈ ಬಗ್ಗೆ ಸಲಹೆ ನೀಡಿದೆ. ಕೆಲಸ ಮುಗಿದ ಮೇಲೂ, ಅವರು ಬಂದು ನೋಡಲಿದ್ದಾರೆ. 2012ರಲ್ಲಿಯೂ ಒಂದು ಬಾರಿ ಈ ಸೇಮ್ ಸ್ಟ್ರಕ್ಚರ್‍ನಲ್ಲಿ ಸಮಸ್ಯೆ ಕಂಡುಬಂದಿತ್ತು ಎಂದು ಹೇಳಿದರು.

ಸಂಖ್ಯೆ ಇಳಿಕೆ: ಬೆಂಗಳೂರು ಮಂದಿಗೆ ಮೆಟ್ರೋ ಗುಮ್ಮ ಆವರಿಸಿದ್ದು, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಏಕಾಏಕಿ ಒಂದೇ ದಿನದಲ್ಲಿ 7 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದೇ ಮಾರ್ಗದಲ್ಲಿ ಬುಧವಾರ 3.88 ಲಕ್ಷ ಮಂದಿ ಪ್ರಯಾಣಿಸಿದ್ದರೇ, ಗುರುವಾರ 3.81 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *