Sunday, 21st July 2019

ಬೆಂಗ್ಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿ

ಬೆಂಗಳೂರು: 2019ರ ಲೋಕಸಭಾ ಚುನಾವಣೆಯಲ್ಲಿ ಭಾರೀ ಕುತೂಹಲವನ್ನು ಮೂಡಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಬಿ.ಕೆ ಹರಿಪ್ರಸಾದ್‍ರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ಸದ್ಯ ರಾಜ್ಯ ಸಭಾ ಸದಸ್ಯರಾಗಿರುವ ಹರಿಪ್ರಸಾದ್ ಅವರ ಅವಧಿ ಜೂನ್‍ಗೆ ಅಂತ್ಯವಾಗಲಿದೆ. ಬೆಂಗಳೂರು ಸೆಂಟ್ರಲ್ ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ರಿಜ್ವಾನ್ ಅರ್ಷದ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದಿಂದ 19 ಅಭ್ಯರ್ಥಿಗಳ ಹೆಸರು ರಾಜ್ಯದಲ್ಲಿ ಅಂತಿಮವಾಗಿದೆ.

1999ರ ಚುನಾವಣೆಯಲ್ಲಿ ಹರಿಪ್ರಸಾದ್ ಅವರು ಅನಂತ್ ಕುಮಾರ್ ಅವರ ವಿರುದ್ಧ ಕಣಕ್ಕೆ ಇಳಿದಿದ್ದರು. ಆದರೆ ಅಂದು 3,44,107 ಮತ ಪಡೆದಿದ್ದ ಹರಿಪ್ರಸಾದ್, 4,10,161 ಮತ ಪಡೆದಿದ್ದ ಅನಂತ್ ಕುಮಾರ್ ಅವರ ವಿರುದ್ಧ ಸೋಲುಂಡಿದ್ದರು.

ಇತ್ತ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಬಿಜೆಪಿಯಲ್ಲಿ ಚಾಲ್ತಿಯಲ್ಲಿದ್ದು, ಆದರೆ ಹೈಕಮಾಂಡ್ ಇದುವರೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇದರ ನಡುವೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುವ ಬಗ್ಗೆ ಅಭಿಯಾನ ಆರಂಭವಾಗಿದೆ. ಆದರೆ ಮೋದಿ ಕರ್ನಾಟಕದಿಂದ ಸ್ಪರ್ಧೆ ಮಾಡುವ ಯಾವುದೇ ರೀತಿಯ ಚಿಂತನೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಉಳಿದಂತೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಮವಾರ ಘೋಷಣೆ ಮಾಡುವ ಸಾಧ್ಯತೆ ಇದ್ದು, ಈ ಕುರಿತು ಅಂತಿಮ ನಿರ್ಧಾರ ರಾಹುಲ್ ಗಾಂಧಿ ನಾಳೆ ತೆಗೆದುಕೊಳ್ಳಲಿದ್ದಾರೆ. ಕ್ಷೇತ್ರದಲ್ಲಿ ಸದಾನಂದ ಡಂಗನವರ್ ಮತ್ತು ಶಾಕೀರ್ ಸನದಿ ಅವರ ನಡುವೆ ಟಿಕೆಟ್‍ಗಾಗಿ ಪೈಪೋಟಿ ನಡೆಯುತ್ತಿದೆ.

Leave a Reply

Your email address will not be published. Required fields are marked *