ಪ್ರವಾಹ ಸಂತ್ರಸ್ತರ ಕಣ್ಣೀರಿಗೆ ನೆರವಾದ ‘ಪಬ್ಲಿಕ್’

– ವಸಂತ ರೆಡ್ಡಿಯಿಂದ ನಿರಾಶ್ರಿತರಿಗೆ ಅಗತ್ಯ ವಸ್ತು

ಬೆಳಗಾವಿ: ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿವೆ. ಅದರಲ್ಲೂ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಆದರೆ ಸರ್ಕಾರ ಪರಿಹಾರದ ರೂಪದಲ್ಲಿ ಕೇವಲ 10 ಸಾವಿರ ಚೆಕ್ ನೀಡಿ ಕೈ ತೊಳೆದುಕೊಂಡಿದೆ. ಪ್ರವಾಹ ನಿಂತ ಬಳಿಕ ಪಬ್ಲಿಕ್ ಟಿವಿ ‘ಬುಲೆಟ್ ರಿಪೋರ್ಟರ್’ ಎಂಬ ಹೆಸರಿನಡಿಯಲ್ಲಿ ಪ್ರವಾಹ ಬಂದ ಸ್ಥಳದಿಂದ ನೈಜ ಚಿತ್ರಣವನ್ನು ಅನಾವರಣ ಮಾಡಿತ್ತು. ಬೆಳಗಾವಿ ಜಿಲ್ಲೆಯ ಕಿಲಬನೂರು ಗ್ರಾಮದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದ, ಅದೆಷ್ಟೋ ಕುಟುಂಬದ ಜನ ಕಣ್ಣೀರು ಹಾಕಿದ್ದರು. ಪಬ್ಲಿಕ್ ಟಿವಿ ವರದಿ ಪ್ರಸಾರವಾದ ಬಳಿಕ ಜನ ಅವರ ಕಣ್ಣೀರು ಒರೆಸಲು ಮುಂದಾಗಿದ್ದಾರೆ.

ಪ್ರವಾಹ ಬಂದಾಗ ಜನರ ಗೋಳು ಎಷ್ಟಿತ್ತೋ ಪ್ರವಾಹ ನಿಂತ ಮೇಲೆ ಆ ಗೋಳು ಇಮ್ಮಡಿಯಾಗಿತ್ತು. ಸರ್ಕಾರ ಪ್ರವಾಹ ಸಂತ್ರಸ್ತರ ಜೊತೆಯಲ್ಲಿ ಇದೆ ಎಂದು ಹೇಳಿತ್ತು. ಆದರೆ ಪಬ್ಲಿಕ್ ಟಿವಿ ಗ್ರೌಂಡ್ ರಿಪೋರ್ಟ್ ಮಾಡಿದಾಗ ಜನರ ಕಣ್ಣೀರಿನ ಒಂದೊಂದೇ ಕಥೆಗಳು ಅನಾವರಣಗೊಂಡಿದೆ. ಮನೆ ಕಳೆದುಕೊಂಡ ಅದೆಷ್ಟೋ ಜನ ತಮ್ಮ ಮನೆಯ ಮುಂದೆ ನಿಂತು ಕಣ್ಣೀರು ಹಾಕಿದ್ದರು. ಮನೆಯಲ್ಲಿ ಊಟ ಇಲ್ಲದೆ ಮಕ್ಕಳು ಶಾಲೆಗೆ ಹಸಿದ ಹೊಟ್ಟೆಯಲ್ಲಿಯೇ ಹೋಗಿ ಪಾಠ ಕೇಳುತಿದ್ದರು.

ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲಬನೂರು ಗ್ರಾಮ ಮತ್ತು ವಿಠ್ಠಲ ಪೇಟೆಯ ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಜೊತೆಗೆ ಆ ಶಾಲೆ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮತ್ತೆ ಮಕ್ಕಳು ಆ ಶಾಲೆಯಲ್ಲಿ ಕಲಿಯುವಂತೆ ಮಾಡಿತ್ತು. ಇದಕ್ಕೆಲ್ಲ ಕಾರಣ ಸುಮಾರು 8 ವರ್ಷದ ಸ್ವಾತಿ ಎಂಬ ಮುಗ್ಧ ಬಾಲಕಿ. ಅಂದು ಪಬ್ಲಿಕ್ ಟಿವಿ ಬುಲೆಟ್ ರಿಪೋರ್ಟರ್ ಶೀರ್ಷಿಕೆ ಅಡಿಯಲ್ಲಿ ಗ್ರೌಂಡ್ ರಿಪೋರ್ಟಿಂಗ್ ಮಾಡಿದಾಗ  ಬಾಲಕಿ ತನ್ನ ಹಸಿವಿನ ರೋಧನೆ ತೋಡಿಕೊಂಡಿದ್ದಳು. ಆಗ ಪಬ್ಲಿಕ್ ಟಿವಿ ಕೇವಲ ಸ್ವಾತಿ ಕಣ್ಣೀರು ಒರೆಸುವ ಪ್ರಯತ್ನ ಮಾಡಲಿಲ್ಲ. ಜೊತೆಗೆ ಅಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳು ಕಣ್ಣೀರು ಒರೆಸಿತ್ತು.

ಕೇವಲ ಪಬ್ಲಿಕ್ ಟಿವಿ ಮಾತ್ರ ಅವಳ ಸಹಾಯಕ್ಕೆ ಬರಲಿಲ್ಲ, ಜೊತೆಯಲ್ಲಿ ಬೆಂಗಳೂರಿನ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಸಂತರೆಡ್ಡಿ ಅವರು ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡರು. ಸಂಪೂರ್ಣ ಜಲಸಮಾಧಿ ಆಗಿರುವ ಕಿಲಬನೂರು ಗ್ರಾಮದ ಸುಮಾರು 150ಕ್ಕೂ ಹೆಚ್ಚಿನ ಕುಟುಂಬಕ್ಕೆ ಪ್ರೆಶರ್ ಕುಕ್ಕರ್, ಅಕ್ಕಿ, ಬೆಳೆ, ಗೋಧಿಯನ್ನು ಕೊಟ್ಟಿದ್ದಾರೆ. ಅಲ್ಲದೆ ವಿಠ್ಠಲ ಪೇಟೆಯ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಜೊತೆಗೆ ಇತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಇದಕ್ಕೆಲ್ಲ ಕಾರಣ ಸ್ವಾತಿ ಅಂದು ಹಾಕಿದ ಕಣ್ಣೀರು, ಅವಳ ಆ ಮುಗ್ಧ ಮುಖದಲ್ಲಿ ಮತ್ತೆ ನಗುವನ್ನು ತರೆಸಲು ದೂರದ ಊರಿನಿಂದ ಜನ ಬಂದು ಆ ಶಾಲೆಯ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೊಡುತ್ತಿದ್ದಾರೆ. ಸ್ವಾತಿ ಎಂಬ ಪುಟ್ಟ ಬಾಲಕಿಯ ತನ್ನ ಹಸಿವಿನ ರೋಧನೆ ಹೇಳಿಕೊಂಡಿದ್ದರಿಂದ ಇಂದು ಈ ಶಾಲೆಯಲ್ಲಿ ಕಲಿಯುತ್ತಿರುವ ನೂರಾರು ಮಕ್ಕಳಿಗೆ ಸಹಾಯ ಆಗುತ್ತಿದೆ.

ಪ್ರವಾಹಕ್ಕೆ ತುತ್ತಾಗಿ ಅದೆಷ್ಟೋ ಶಾಲೆಗಳು, ಅಲ್ಲಿ ಕಲಿಯುವ ಮಕ್ಕಳ ಭವಿಷ್ಯ ಇಂದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಆದರೆ ಪಬ್ಲಿಕ್ ಟಿವಿ ವರದಿ ಬಳಿಕ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಎಲ್ಲಾ ಶಾಲಾ ಮಕ್ಕಳಿಗೆ ಮತ್ತೊಂದು ಸಾರಿ ಪುಸ್ತಕವನ್ನು ವಿತರಿಸುವಂತೆ ಆದೇಶ ಮಾಡಿದೆ. ಜೊತೆಯಲ್ಲಿ ಅನೇಕ ದಾನಿಗಳು ಸರ್ಕಾರಿ ಶಾಲಾ ಮಕ್ಕಳ ಜೊತೆಯಲ್ಲಿ ನಿಲ್ಲುವಂತೆ ಮಾಡಿದೆ.

Leave a Reply

Your email address will not be published. Required fields are marked *