Connect with us

Bengaluru City

ಜಯನಗರ ಲೈಬ್ರರಿ ಆವರಣದಲ್ಲಿ ಎಂಪಿ ಆಫೀಸ್ – ಇದು ಸರಿಯೇ ತೇಜಸ್ವಿ ಸೂರ್ಯ?

Published

on

ಬೆಂಗಳೂರು: ಯುವ ಸಂಸದ ತೇಜಸ್ವಿ ಸೂರ್ಯ ತನ್ನ ರಾಜಕೀಯ ಗುರುವಿಗೆ ತಿರುಮಂತ್ರ ಹೊಡೆದ್ರಾ ಎನ್ನುವ ಪ್ರಶ್ನೆ ಈಗ ಚರ್ಚೆಯಾಗುತ್ತಿದೆ.

ಹೌದು. ಸಂಸದ ಅನಂತ ಕುಮಾರ್ ಉದ್ಘಾಟಿಸಿದ, ಶಾಸಕ ವಿಜಯ ಕುಮಾರ್ ಪಾಠ ಹೇಳಿದ್ದ ಲೈಬ್ರರಿ ಜಾಗಕ್ಕೆ ತೇಜಸ್ವಿ ಕಾಲಿಟ್ಟಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಸಂಸದರಾಗಿ ಆಯ್ಕೆಯಾದ ಬಳಿ ಸಂಸದರ ಕಚೇರಿ ಕೊಡಿ ಎಂದು ತೇಜಸ್ವಿ ಸೂರ್ಯ ಬಿಬಿಎಂಪಿಗೆ ಮನವಿ ಮಾಡಿದ್ದರು. ಈ ವೇಳೆ ಅನಂತಕುಮಾರ್ ಅವರ ಕಚೇರಿಯನ್ನು ಬಳಕೆ ಮಾಡಲು ನಿರಾಕರಿಸಿದ ಪರಿಣಾಮ ಅವರಿಗೆ ಜಯನಗರದ ಸಾರ್ವಜನಿಕ ಲೈಬ್ರರಿ ಆವರಣದಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ.

ಇದು ಸರಿಯೇ?
ಸಿಎ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಈ ಲೈಬ್ರರಿಯಲ್ಲಿ ವಿದ್ಯಾರ್ಥಿಗಳು ನಿತ್ಯ ಓದುತ್ತಾರೆ. ಸದ್ಯ ಸಂಸದರ ಕಚೇರಿ ಇಲ್ಲಿ ತೆರೆದರೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಸಂಸದರನ್ನು ನೋಡಲು ನಿತ್ಯ ಬರುತ್ತಾರೆ. ಈ ವೇಳೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೇ ಜೊತೆಗೆ ಮುಖ್ಯ ರಸ್ತೆ ಆಗಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗಲಿದೆ. ಇದರಿಂದ ಲೈಬ್ರರಿಗೆ ಬರುವ ವಿದ್ಯಾರ್ಥಿಗಳಿಗೆ ಓದಲು ಸಮಸ್ಯೆಯಾಗುತ್ತದೆ. ಈ ವಿಚಾರ ತಿಳಿದಿದ್ದರೂ ತೇಜಸ್ವಿ ಸೂರ್ಯ ಅವರು ಇಲ್ಲೇ ಕಚೇರಿ ಮಾಡುತ್ತಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಈ ಸ್ಥಳವನ್ನು ಕೆಲ ಸಂಘ ಸಂಸ್ಥೆಗಳು ಬಡ ಮಕ್ಕಳಿಗೆ ಟ್ಯೂಷನ್ ನೀಡಲು ಬಳಸುತ್ತಿದ್ದವು. ಈ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಾಗಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದಲ್ಲಿ ಮೂಡಿದೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು, ಸಂಸದರ ಕಚೇರಿ ನಿರ್ಮಾಣವಾಗುತ್ತಿರುವುದು ಜಯನಗರದ ಸಾರ್ವಜನಿಕ ಲೈಬ್ರರಿ ಇರುವ ಕಟ್ಟದ ಗ್ರೌಂಡ್ ಫ್ಲೋರಿನಲ್ಲಿ. ಈ ಕಟ್ಟಡ ಮೊದಲ ಫ್ಲೋರಿನಲ್ಲಿ ಲೈಬ್ರರಿ ಇದೆ. ಅದರ ಕೆಳಗೆ ಇರುವ ಟ್ರಸ್ಟ್ ಕಚೇರಿಯನ್ನು ಸಂಸದರ ಕಚೇರಿಯಾಗಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ನನ್ನ ಪರವಿದ್ದಾರೆ. ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಅಷ್ಟೇ. ಕೆಲವರು ಮೊದಲು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಟ್ರಸ್ಟನ್ನು ಅಲ್ಲಿಂದ ಖಾಲಿ ಮಾಡಿಸಿ ಬೇರೆಯವರಿಗೆ ನೀಡಲು ತೀರ್ಮಾನ ಮಾಡಿದ್ದರು. ಸದ್ಯ ಬಿಬಿಎಂಪಿ ಸಂಸದರ ಕಚೇರಿಗೆ ನೀಡಿದೆ ಎಂದರು.