Latest
ಟಿಎಂಸಿ ಸೇರಿದ ಪತ್ನಿಗೆ ಡಿವೋರ್ಸ್ ನೀಡಲು ಮುಂದಾದ ಬಿಜೆಪಿ ಸಂಸದ

ಕೋಲ್ಕತ್ತಾ: ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಪಕ್ಷದ ಸೌಮಿತ್ರ ಖಾನ್ ಅವರು ತಮ್ಮ ಪತ್ನಿ ಸುಜಾತಾ ಮಂಡಲ್ ಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ.
ಹೌದು. ಸುಜಾತಾ ಅವರು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಸೌಮಿತ್ರಾ, ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಲು ನಿರ್ಧರಿಸಿದ್ದಾರೆ. ಸೌಮಿತ್ರಾ ಅವರು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಮತ್ತು ಬಿಷ್ಣುಪುರದ ಸಂಸದರಾಗಿದ್ದಾರೆ.
ಸುಜಾತಾ ಅವರು ಇಂದು ಕೋಲ್ಕತ್ತಾದಲ್ಲಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕುಟುಂಬದಲ್ಲಿನ ದ್ವೇಷವನ್ನು ಬಹಿರಂಗಪಡಿಸಿದ್ದಾರೆ. ಪತ್ನಿಯ ಈ ವರ್ತನೆಯಿಂದ ಬೇಸತ್ತ ಸೌಮಿತ್ರ ಖಾನ್, ಸುಜಾತಾ ಅವರಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಬಿಷ್ಣುಪುರದ ಬಾರ್ಜೋರಾದಲ್ಲಿ ಸುಜಾತಾ ಅವರ ಕಾರು ಮತ್ತು ಮನೆಯ ಭದ್ರತೆಯನ್ನು ಹಿಂಪಡೆಯಲಾಗಿದೆ.
ಸುಜಾತಾ ಮಂಡಲ್ ಖಾನ್ ಅವರು ಇಂದು ತೃಣಮೂಲ ಸಂಸದ ಸೌಗತಾ ರಾಯ್ ಮತ್ತು ವಕ್ತಾರ ಕುನಾಲ್ ಘೋಷ್ ಅವರ ಸಮ್ಮುಖದಲ್ಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದೇನೆ. ಆದರೆ ಸದ್ಯಕ್ಕೆ ಮೂಲ ಬಿಜೆಪಿಗರಿಗೇ ಪಕ್ಷದಲ್ಲಿ ಬೆಲೆ ಗೌರವ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಇಂದು ನಾನು ಪಕ್ಷವನ್ನು ತ್ಯಜಿಸುತ್ತಿದ್ದೇನೆ. ಅಲ್ಲದೆ ಓರ್ವ ಮಹಿಳೆಯಾಗಿ ನನಗೆ ಆ ಪಕ್ಷದಲ್ಲಿರುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಟಿಎಂಸಿ ಪಕ್ಷದ ಪ್ರಬಲ ನಾಯಕ ಹಾಗೂ ಮಾಜಿ ಶಾಸಕ ಸುವೆಂಧು ಅಧಿಕಾರಿ ತಮ್ಮ ಮಾತೃಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದ ಬೆನ್ನಿಗೆ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಪತ್ನಿ ಟಿಎಂಸಿಗೆ ಸೇರ್ಪಡೆಯಾಗಿರುವುದು ಇದೀಗ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದೆ.
West Bengal: BJP MP Saumitra Khan's wife Sujata Mondal Khan joins Trinamool Congress in Kolkata. pic.twitter.com/xBukTrfEWB
— ANI (@ANI) December 21, 2020
