Thursday, 17th October 2019

Recent News

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಪ್ರಗ್ಯಾ ಸಿಂಗ್ ಠಾಕೂರ್ ವಿವಾದ

ನವದೆಹಲಿ: ಲೋಕಸಭಾ ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ವಿವಾದ ಸೃಷ್ಟಿಸಿದ್ದು, ತಮ್ಮ ಗುರುವಿನ ಹೆಸರನ್ನು ಉಲ್ಲೇಖಿಸುವ ಮೂಲಕ ವಿರೋಧ ಪಕ್ಷದ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ‘ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಆದ ನಾನು, ಪೂರ್ಣ ಚೆತ್ನಾಂದ ಅವಧೇಶಾನಂದ ಗಿರಿ’ ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಅಡ್ಡಿಪಡಿಸಿದ್ದಾರೆ. ಸಾಧ್ವಿ ಪ್ರಗ್ಯಾ ಸಿಂಗ್ ಅವರು ಪ್ರಮಾಣ ವಚನದ ಪದಗಳನ್ನೇ ಬದಲಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗ್ಯಾ ಅವರು ತಮ್ಮ ಗುರು ಸ್ವಾಮಿ ಅವಧೇಶಾನಂದ ಗಿರಿ ಅವರ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡೆವಿಟ್‍ನಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಹೆಸರು ಬಳಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ವೀರೇಂದ್ರ ಕುಮಾರ್, ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಅರಿವಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಲೋಕಸಭಾ ಅಧಿಕಾರಿಗಳು ಇದೇ ವೇಳೆ ಪ್ರಗ್ಯಾ ಅವರಿಗೆ ತಮ್ಮ ತಂದೆಯ ಹೆಸರನ್ನು ಪ್ರಮಾಣ ವಚನ ಸಂದರ್ಭದಲ್ಲಿ ಉಲ್ಲೇಖಿಸುವಂತೆ ಸೂಚಿಸಿದ್ದಾರೆ. ಸ್ಪೀಕರ್ ವೀರೇಂದ್ರ ಕುಮಾರ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಚುನಾವಣಾ ಆಯೋಗ ನೀಡಿದ ವಿಜಯದ ಪತ್ರದಲ್ಲಿದ್ದಂತೆ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಕರೆದಿದ್ದಾರೆ. ಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾದ್ದರಿಂದ ಪ್ರಮಾಣ ವಚನ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಶಾಂತತೆ ಕಾಪಾಡುವಂತೆ ಅವರು ಸೂಚಿಸುತ್ತಿದ್ದರು.

ಎರಡು ಬಾರಿ ಅಡಚಣೆ ಮಾಡಿದ ನಂತರ ಮೂರನೇ ಬಾರಿಗೆ ಪ್ರಗ್ಯಾ ಸಿಂಗ್ ಅವರು ತಮ್ಮ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಲೋಕಸಭಾ ಚುನಾವಣೆಯಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಎರಡು ಬಾರಿ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಜಯಗಳಿಸಿದ್ದಾರೆ.

Leave a Reply

Your email address will not be published. Required fields are marked *