Connect with us

Bidar

ಹಿಂದಿಯಲ್ಲಿ ಟ್ವೀಟ್ ಮಾಡಿದ ಬಿಜೆಪಿ ಸಂಸದ ಖೂಬಾ – ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ

Published

on

ಬೆಂಗಳೂರು: ಬೀದರ್ ಸಂಸದ ಭಗವಂತ ಖೂಬಾ ಶುಕ್ರವಾರ ಹಿಂದಿಯಲ್ಲಿ ಟ್ವೀಟ್ ಮಾಡಿ, ಹೊಸ ರೈಲುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಬೀದರ್ ನಿಂದ ಹೊಸ ರೈಲುಗಳ ಚಾಲನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರ ಬಗ್ಗೆ ಸಂಸದ ಖೂಬಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಟ್ವೀಟ್ ನಲ್ಲಿ ಏನಿತ್ತು: ಯುಗಾದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೀದರ್ ನಿಂದ ಕೊಲ್ಲಾಪುರಕ್ಕೆ 11 ರೈಲುಗಳ ಚಾಲನೆಗೆ ಅನುಮತಿ ನೀಡಿದೆ. ರೈಲುಗಳು ಬೀದರ್ ನಿಂದ ಲಾತೂರ್, ಪಂಡರಾಪುರ ಮಾರ್ಗವಾಗಿ ಕೊಲ್ಲಾಪುರ ತಲುಪಲಿವೆ. ಕೇಂದ್ರ ಸರ್ಕಾರದ ಆದೇಶದ ಪತ್ರ ನಿಮ್ಮ ಮುಂದೆ ಹಾಜರುಪಡಿಸಿದ್ದೇನೆ.

ಸಂಸದರು ಟ್ವೀಟ್ ಮಾಡುತ್ತಿದ್ದಂತೆ ಕೆಲವರು ಕರ್ನಾಟಕ ರಾಜ್ಯದಲ್ಲಿ ಬೀದರ್ ಇದೆ. ಹಾಗಾಗಿ ಕನ್ನಡದಲ್ಲಿ ಟ್ವೀಟ್ ಮಾಡಿದ್ರೆ ಉತ್ತಮ ಅಂತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕನ್ನಡಿಗರ ಮೇಲೆ ಒತ್ತಾಯಪೂರ್ವಕ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಅದೇ ಟ್ವೀಟ್ ನ್ನು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಬರೆದುಕೊಳ್ಳಬಹುದಿತ್ತು ಅಂತಾ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಹಿಂದಿ ಬೇಕು: ಕೇಂದ್ರ ಸಚಿವ ಸದಾನಂದ ಗೌಡ 

ಕನ್ನಡದಲ್ಲಿಯೇ ಉತ್ತರ ನೀಡಿದ ಸಂಸದರು: ತಮ್ಮ ಹಿಂದಿ ಭಾಷೆಯ ಟ್ವೀಟ್ ಗೆ ಪರ-ವಿರೋಧದ ಚರ್ಚೆಗಳು ಆರಂಭವಾಗುತ್ತಿದ್ದಂತೆ ಸಂಸದರು ಕನ್ನಡದಲ್ಲಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾಡಭಾಷೆ, ರಾಷ್ಟ್ರಭಾಷೆ ಮೇಲೆ ಗೌರವವಿಲ್ಲದವರ ಜೊತೆ ಮಾತನಾಡುವುದು ಯೋಗ್ಯವಲ್ಲವೆಂದು ಭಾವಿಸುತ್ತಾ, ನನ್ನ ಟ್ವೀಟ್‍ಗಳು 3 ಭಾಷೆಯಲ್ಲೂ ಬರುತ್ತವೆ ಹಾಗೆ ಬಂದಿವೆ ಅಂತಾ ಉತ್ತರಿಸಿದ್ದಾರೆ. ಇದನ್ನೂ ಓದಿ: ಹಿಂದಿ ಹೇರಿಕೆ ಅಭಿಯಾನಕ್ಕೆ ಜಯ: ಶೀಘ್ರದಲ್ಲೇ ಸ್ಥಳೀಯ ಭಾಷೆಗಳಲ್ಲೂ ರೈಲ್ವೆ ಟಿಕೆಟ್ ಮುದ್ರಣ

ಹಿಂದಿಯಲ್ಲಿ ಬರೆದುಕೊಂಡಿರುವ ಮಾಹಿತಿಯನ್ನೇ ಸಂಸದರು ತಮ್ಮ ಫೇಸ್‍ಬುಕ್ ನಲ್ಲಿ ಕನ್ನಡ ಮತ್ತು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಸಂಸದರ ಪರವಾಗಿ ಕೆಲವರು ಟ್ವೀಟ್ ಮಾಡಿದ್ದು, ಈ ರೀತಿಯ ವಿರೋಧಿಗಳ ಟ್ವೀಟ್ ಗೆ ನೀವು ಉತ್ತರ ನೀಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: #NammaMetroHindiBeda ಬೆಂಗಳೂರಿನಲ್ಲಿ ನಂ.1 ಟ್ರೆಂಡಿಂಗ್ ಟಾಪಿಕ್