Connect with us

Bagalkot

ಡಿನ್ನರ್‌ಗೆ ಹೋಗ್ತೀರಾ, ಕ್ಷೇತ್ರದ ಜನರ ಸಮಸ್ಯೆ ಕೇಳೋಕಾಗಲ್ವ: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಕಿಡಿ

Published

on

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಓಡಾಡುತ್ತೀರಿ, ಡಿನ್ನರ್‌ಗೆ ಹೋಗುತ್ತೀರಿ. ಆದರೆ ಕ್ಷೇತ್ರದ ಜನರ ಸಮಸ್ಯೆ ಕೇಳುವುಕ್ಕೆ ಹೋಗಲು ನಿಮಗೇಕೆ ಆಗುತ್ತಿಲ್ಲ ಎಂದು ಶಾಸಕ ಶ್ರೀರಾಮುಲು ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಬದಾಮಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಶಾಸಕರು, ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿದ್ದರು. ರಾಜ್ಯದ ಯಾವ ಮೂಲೆಯಲ್ಲಿ ನಿಂತರೂ ಗೆಲ್ಲುತ್ತೇನೆ ಎಂಬ ಅಹಂನಲ್ಲಿ ಇದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತೇನೆ ಎಂಬ ಭಯದಿಂದ ಬಾದಾಮಿಗೆ ಬಂದು ನಿಂತರು. ಇಲ್ಲಿನ ಜನರು ಅವರಿಗೆ ಪುನರ್ಜನ್ಮ ಕೊಟ್ಟಿದ್ದಾರೆ. ಅಂತಹ ಜನರು ಸಂಕಷ್ಟದಲ್ಲಿ ಸಿಲುಕ್ಕಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಆರೋಗ್ಯದಲ್ಲಿ ಏರು ಪೇರು ಆಗುವುದು ಸಹಜ. ಆದರೆ ಕಣ್ಣು ಚಿಕಿತ್ಸೆ ಅಂತ ಹೇಳಿ ದೆಹಲಿಗೆ ಹೋಗುತ್ತೀರಾ. ನಿಮ್ಮನ್ನು ಕ್ಷೇತ್ರದ ಜನ ನಿಮ್ಮ ಕ್ಷಮಿಸುತ್ತಾರಾ. ಬದಾಮಿ ಕ್ಷೇತ್ರಕ್ಕೆ ನಿಮ್ಮ ಪತ್ರ ಯತೀಂದ್ರ ಅವರು ಬಂದಿದ್ದಾರೆ. ಅದಕ್ಕೆ ನಾವು ಖುಷಿ ಪಡುತ್ತೇನೆ. ಆದರೆ ನೀವು ಹುಷಾರಿಲ್ಲ ಅಂತ ಹೇಳಿ ಬೇರೆ ಕಡೆ ಓಡಾಡುತ್ತಾ ಇದ್ದೀರಾ ಹೊರತು ಬದಾಮಿ ಕ್ಷೇತ್ರಕ್ಕೆ ಬರಲಿಲ್ಲ. ಇದು ಯಾವ ನ್ಯಾಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 17 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, 42 ಸಾವಿರ ಎಕ್ಟೇರ್ ಭೂಮಿ ಹಾನಿಯಾಗಿದೆ. ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಘೋಷಣೆ ಮಾಡಿವೆ. ಮಹಾ ಮಳೆಯಿಂದಾಗಿ ಮೃತ ಪಟ್ಟವರ ಕುಟುಂಬಕ್ಕೆ ಐದು ಲಕ್ಷ ರೂ. ಹಾಗೂ ನಿರಾಶ್ರಿತರಿಗೆ 10 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಬಾಡಿಗೆ ಮನೆಯಲ್ಲಿ ಇರುವವರಿಗೆ 5 ಸಾವಿರ ರೂ. ಕೊಡುತ್ತೇನೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಿಯೋಗ ತೆಗೆದುಕೊಂಡು ದೆಹಲಿಗೆ ಹೋಗಿ, ಶಾಶ್ವತ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಇನ್ನೂ ಹೆಚ್ಚಿನ ಅನುದಾನ ನೀಡಿ ಅಂತ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಎಲ್ಲರೂ ಪಕ್ಷಭೇದ ಮರೆತು, ನೆರೆ ಸಂತ್ರಸ್ತರ ಬೆನ್ನಿಗೆ ನಿಂತು  ಮಾನವೀಯತೆ ಮೆರೆಯಬೇಕಾಗಿದೆ ಎಂದರು.