Connect with us

Districts

ಮಧ್ಯರಾತ್ರಿ ಯುವಕರೊಂದಿಗೆ ಕಬಡ್ಡಿ ಆಡಿದ ಬಿಜೆಪಿ ಶಾಸಕ ರಾಜುಗೌಡ

Published

on

ಯಾದಗಿರಿ: ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮಂಕಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಈಗ ಫುಲ್ ಜೋಶ್‌ನಲ್ಲಿದ್ದಾರೆ. ಶನಿವಾರ ತಮ್ಮ ಕ್ಷೇತ್ರದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಯುವಕರೊಂದಿಗೆ ಕಬಡ್ಡಿ ಕಣದಲ್ಲಿ ರಾಜುಗೌಡ ಮಿಂಚಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡದರಾಳದಲ್ಲಿ ಶನಿವಾರ ಶ್ರೀ ಬಸವೇಶ್ವರ ಯುವ ಬಳಗ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ, ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಈ ಪಂದ್ಯಾವಳಿಯನ್ನು ಶಾಸಕ ರಾಜುಗೌಡ ಅವರು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಯುವಕರೊಂದಿಗೆ ಸ್ವತಃ ತಾವೇ ಕಬಡ್ಡಿ ಕಣಕ್ಕಿಳಿದು ಆಟವಾಡಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾದರು.

ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನಗೆದ್ದಿದ್ದಾರೆ. ಕಾರ್ಯಕ್ರಮ ಉದ್ಘಾಟನೆ ಮಾಡಿ ಭಾಷಣದ ಮೂಲಕ ಯುವಕರಿಗೆ ಪ್ರೋತ್ಸಾಹಿಸಿದ್ದಲ್ಲದೆ, ಸ್ವತಃ ತಾವೇ ಯುವಕರೊಂದಿಗೆ ಕಬಡ್ಡಿ ಆಟವಾಡಿರುವುದು ವಿಶೇಷವಾಗಿದ್ದು, ಶಾಸಕರ ಕಾರ್ಯಕ್ಕೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.