ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

– ದೇವೇಗೌಡರನ್ನು ಹಾಡಿ ಹೊಗಳಿದ ಶಾಸಕರು

ಹಾಸನ: ನೂತನ ಸಂಸದರು ರಾಜೀನಾಮೆಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಬೇಕು. ಅಷ್ಟೇ ಅಲ್ಲ ರಾಜೀನಾಮೆಯನ್ನು ಸ್ಪೀಕರ್‍ಗೆ ರಾಜೀನಾಮೆ ನೀಡಬೇಕೆ ಹೊರತು ಮಾದ್ಯಮಗಳ ಮುಂದಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿಗೆ ಐದು ಲಕ್ಷಕ್ಕೂ ಹೆಚ್ಚು ಮತಗಳು ಬಂದಿದೆ. ಇದು ಪಕ್ಷದ ಸಾಧನೆ. ಈ ಬಾರಿಯ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿತ್ತು. ಆದರೆ ಕುಟುಂಬ ರಾಜಕಾರಣ ಅವರನ್ನು ತುಮಕೂರಿಗೆ ಹೋಗುವಂತೆ ಮಾಡಿತು. ಅವರು ಇಡೀ ದೇಶದ ಮುತ್ಸದಿರಾಜಕಾರಣಿ, ರಾಜ್ಯ ಹಾಗೂ ದೇಶದ ಆಸ್ತಿ. ಅವರನ್ನು ತುಮಕೂರಿನಲ್ಲಿ ಸೋಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಾವು ಸೋತರೂ ವ್ಯವಸ್ಥಿತವಾಗಿ ಚುನಾವಣೆಯನ್ನ ಎದುರಿಸಿದ್ದೇವೆ. ಇನ್ನಷ್ಟು ತಂತ್ರಗಳನ್ನ ಮಾಡಿದ್ದರೆ ಗೆಲುವನ್ನು ಕಾಣಬಹುದಿತ್ತು. ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಪಕ್ಷ ಸುಭದ್ರವಾಗಿದೆ. ಕಾಶ್ಮೀರದಿಂದ ಕರ್ನಾಟಕದ ಚಾಮರಾಜನಗರದವರೆಗೂ ಪಕ್ಷದ ಬೆಳವಣಿಗೆ ಆಗಿದೆ. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀನಾಯವಾಗಿ ಹೀಯಾಳಿಸಿದವರು ಹೀನಾಯವಾಗಿ ಸೋತಿದ್ದಾರೆ. ಈ ಪಟ್ಟಿಯಲ್ಲಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ಕೂಡ ಇದ್ದಾರೆ. ಎಚ್.ಡಿ.ರೇವಣ್ಣ ಅಭಿವೃದ್ಧಿ ಬಗ್ಗೆ ಮಾತಾಡಿದರೆ ಅವರ ಪರ ಇರುತ್ತೇನೆ. ರಾಜಕೀಯ ಮಾತನಾಡಿದರೆ ನಾನು ಅವರ ವಿರುದ್ಧವಾಗಿರುತ್ತೇನೆ. ನಾನು ಎನ್ನುವುದನ್ನು ಬಿಡದಿದ್ದರೆ ಜನ ಮನೆಗೆ ಕಳುಹಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಮಂಡ್ಯ ಕ್ಷೇತ್ರ ಎಂದು ಸಿಎಂ ಕುಮಾರಸ್ವಾಮಿಯವರ ವಿರುದ್ಧ ಗುಡುಗಿದರು.

ನರೇಂದ್ರ ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದರು. ಸಚಿವರು ತಮ್ಮ ಮಾತಿಗೆ ಬದ್ಧರಾಗಿರಬೇಕು ಎಂದರು.

ಆಪರೇಷನ್ ಕಮಲದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾರಾದರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ ಎಂದು ನಗೆ ಬೀರಿದರು.

ಹಾಸನ ಜಿಲ್ಲೆಗೆ ಐಐಟಿ ಬೇಡ. ಮೊದಲು ರೈತರಿಂದ ವಶಪಡಿಸಿಕೊಂಡಿರುವ ಭೂಮಿ ವಾಪಾಸ್ ನೀಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಐಐಟಿಗೆ ವಶಪಡಿಸಿಕೊಂಡಿರುವು ಭೂಮಿಯನ್ನು ರೈತರಿಗೆ ವಾಪಾಸ್ ಕೊಡಿಸುತ್ತೇನೆ. ಇದೇ ನನ್ನ ಮೊದಲ ಕಮಿಟ್ ಮೆಂಟ್. ಜಾಗ ಪಡೆದು ಮನೆ ರೈತರ ಹಾಳುಮಾಡುವುದು ಬೇಡ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲೇ ವಿಮಾನ ನಿಲ್ದಾಣ ಮಾಡಲಿ. ಹೆಚ್ಚುವರಿ ಭೂಮಿ ಸ್ವಾಧೀನ ಅವಶ್ಯಕತೆ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *