Wednesday, 22nd May 2019

ಅಪ್ಪ ಮಕ್ಕಳ ತಂಟೆಗೆ ಹೋಗಬೇಡಿ-ಬಿಜೆಪಿ ಹೈಕಮಾಂಡ್‍ಗೆ ಕೊಟ್ಟಿದ್ಯಾರು ಎಚ್ಚರ..!?

ಬೆಂಗಳೂರು: ಸದ್ಯ ಬಿಜೆಪಿಯದ್ದು ಅಕ್ಷರಶಃ ಬೆಂಕಿ ಜೊತೆಗಿನ ಸರಸ. ಅದಕ್ಕೆ ಕಾರಣನೂ ಇದೆ. ಮೇಲ್ನೋಟಕ್ಕೆ ಬಿಜೆಪಿ ಸರ್ಕಾರ ಉರುಳಿಸೋಕೆ ಆಪರೇಶನ್ ನಡೆಸ್ತಿದೆ ಅನ್ನೋದಷ್ಟೇ ಗೊತ್ತಾಗುತ್ತಿದೆ. ಆದ್ರೆ ಇದರ ಸಾಧಕ ಬಾಧಕಗಳನ್ನ ಬಗ್ಗೆ ವಿಶ್ಲೇಷಣೆ ಮಾಡ್ತಾ ಹೋದ್ರೆ ಬಿಜೆಪಿ ಅದೆಂಥಾ ರಿಸ್ಕ್ ತೆಗೆದುಕೊಂಡಿದೆ ಅನ್ನೋದು ಗೊತ್ತಾಗುತ್ತದೆ. ಈಗಾಗಲೇ ಬಿಜೆಪಿಯ ಒಂದು ವರ್ಗ ನೇರವಾಗಿ ಅಮಿತ್ ಶಾ ಮತ್ತು ಮೋದಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದೆಯಂತೆ. ಬೆಂಕಿ ಜೊತೆ ಯಾವುದೇ ಕಾರಣಕ್ಕೂ ಆಟ ಆಡೋದು ಬೇಡ ಅನ್ನೋ ಸೂಕ್ಷ್ಮ ಸಂಗತಿಯನ್ನ ಹೈಕಮಾಂಡ್ ಆಪರೇಷನ್ ಕಮಲಕ್ಕೆ ಮುಂದಾದ ನಾಯಕರಿಗೆ ಸೂಚಿಸಿದೆಯಂತೆ.

ಆಪರೇಶನ್ ಮಾಡೋದಕ್ಕೆ ಏನೂ ತೊಂದರೆಯಿಲ್ಲ. ಒಂದು ವೇಳೆ ಆಪರೇಶನ್ ಫೇಲ್ಯೂರ್ ಆದ್ರೆ ಮಾತ್ರ ಬಿಜೆಪಿಗೆ ದೊಡ್ಡ ಹೊಡೆತ ಕೊಡುತ್ತೆ ಅಂತ ಈಗಾಗಲೇ ಒಂದು ವರ್ಗದ ಹೈಕಮಾಂಡ್‍ಗೆ ಸಂದೇಶ ತಲುಪಿಸಿದೆ. ಅದಕ್ಕಾಗಿನೇ ಈ ಬಾರಿ ಕೊನೆ ಕ್ಷಣದವರೆಗೂ ಗುಟ್ಟು ಬಿಟ್ಟುಕೊಡದೇ ಸೀಕ್ರೆಟ್ ಆಗಿಯೇ ಮಾಡಲಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಪದೇ ಪದೇ ಅಪ್ಪ-ಮಕ್ಕಳನ್ನ ಟಾರ್ಗೆಟ್ ಮಾಡ್ತನೇ ಇದ್ದರು. ಕುಮಾರಸ್ವಾಮಿ ಮತ್ತು ದೇವೇಗೌಡರನ್ನ ಟೀಕೆ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲೂ ಇದೂ ಒಂದು ಕಾರಣ ಅನ್ನೋ ಮಾತಿದೆ. ಯಾಕಂದ್ರೆ ಅಪ್ಪ-ಮಕ್ಕಳನ್ನ ಸಿದ್ದು ಹೀಯಾಳಿಸಿದ್ದಕ್ಕೆ ಒಕ್ಕಲಿಗರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದರು ಎನ್ನಲಾಗುತ್ತೆ.

ಬಿಜೆಪಿ ವಿರುದ್ಧ ಒಕ್ಕಲಿಗರು ತಿರುಗಿಬೀಳ್ತಾರಾ..!?:
ಆವತ್ತು ಹೆಚ್‍ಡಿಡಿ-ಹೆಚ್‍ಡಿಕೆಯನ್ನ ಸಿದ್ದು ಟಾರ್ಗೆಟ್ ಮಾಡಿದ್ದಕ್ಕೇನೆ ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಜೆಡಿಎಸ್ ಕ್ಲೀನ್ ಸ್ವೀಪ್ ಮಾಡಿತ್ತು ಅಂತ ಹೇಳಲಾಗುತ್ತೆ. ಕಾಂಗ್ರೆಸ್ ವಿರುದ್ಧದ ಸಿಟ್ಟಿಗೆ ಸಿಡಿದೆದ್ದು ಜೆಡಿಎಸ್‍ಗೆ ಮತ ಹಾಕಿರಬಹುದು ಅನ್ನೋ ಮಾತಿದೆ. ಈಗ ಬಿಜೆಪಿ ಇದೆ ಕೆಲಸವನ್ನ ಮಾಡ್ತಾ ಇದೆ. ಈಗ ಸರ್ಕಾರ ಬಿದ್ದು ಹೋದ್ರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು ಎನ್ನಲಾಗ್ತಿದೆ. ಈ ಭಯ ಬಿಜೆಪಿಯ ಒಂದು ವರ್ಗಕ್ಕೆ ಈಗಾಗಲೇ ಕಾಡೋಕೆ ಶುರುವಾಗಿದ್ಯಂತೆ. ಇದನ್ನ ಹೈಕಮಾಂಡ್ ಗಮನಕ್ಕೂ ತರಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ತುಮಕೂರು ಮೈಸೂರು ಭಾಗಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಬಿಜೆಪಿ ಸರ್ಕಾರ ಬೀಳಿಸೋಕೆ ಹೋದ್ರೆ ಒಕ್ಕಲಿಗರ ಕೋಪ ಬಿಜೆಪಿ ಕಡೆಗೆ ತಿರುಗಬಹುದು. ಇದ್ರಿಂದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಐದರಿಂದ ಆರು ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಬಹುದು ಅಥವಾ ಕಳೆದುಕೊಳ್ಳಬೇಕಾಗಬಹುದು ಅಂತ ಬಿಜೆಪಿಯ ಒಂದು ವರ್ಗ ಹೈಕಮಾಂಡ್‍ಗೆ ವಿಷಯವನ್ನು ರವಾನಿಸಿದೆ ಎನ್ನಲಾಗುತ್ತಿದೆ.

ಜೇನುಗೂಡಿಗೆ ಕಲ್ಲು:
ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನ ಕೆಡವಿದ್ರೆ ಬಿಜೆಪಿಗೆ ಇಂತದ್ದೊಂದು ಆತಂಕ ಇದ್ಯಂತೆ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲೆಸೆದಂತೆ ಅಂತ ಹೇಳಲಾಗ್ತಿದೆ. ಮತ್ತೊಂದು ಕಡೆ ಈಗ ಲಿಂಗಾಯತರು ಕೂಡ ಸಂಪೂರ್ಣವಾಗಿ ಬಿಜೆಪಿ ಕಡೆಗಿಲ್ಲ. ಈಗ ಬಿಎಸ್‍ವೈ ಲಿಂಗಾಯತರ ಏಕೈಕ ಸರದಾರನಾಗಿ ಉಳಿದಿಲ್ಲ. ಹೀಗಾಗಿ ಈಗ ಒಕ್ಕಲಿಗರ ಜೇನುಗೂಡಿಗೆ ಕೈ ಹಾಕಿದ್ರೆ ಎಲ್ಲಿ ಲೋಕಸಭಾ ಚುನಾವಣೆಗೆ ಎಫೆಕ್ಟ್ ಆಗುತ್ತಾ ಅನ್ನೋ ಭಯ ಕೆಲ ಬಿಜೆಪಿ ನಾಯಕರಿಗಿದ್ಯಂತೆ. ಅದಕ್ಕಾಗಿನೇ ಪಕ್ಕಾ ಆಪರೇಷನ್ ಸಕ್ಸಸ್ ಆಗೋದಾದ್ರೆ ಮಾತ್ರ ಕೈ ಹಾಕಿ ಅಂತ ಹೈಕಮಾಂಡ್ ಹೇಳಿದೆ ಎನ್ನಲಾಗ್ತಿದೆ. ಇದರ ಜೊತೆಗೆ ಯಡಿಯೂರಪ್ಪನವರನ್ನ ಸಂಪೂರ್ಣವಾಗಿ ನಂಬಿಕೊಂಡು ಹೋದ್ರು ಕಷ್ಟ ಅನ್ನೋ ಎಚ್ಚರಿಕೆಯನ್ನ ಹೈಕಮಾಂಡ್‍ಗೆ ಆ ವರ್ಗ ತಲುಪಿಸಿದೆ ಎನ್ನಲಾಗ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *