Saturday, 17th August 2019

`ಕರ್ಮಭೂಮಿ’ಯಲ್ಲಿ ಕೇಸರಿ ನಾಯಕನಿಗೆ ಕಂಬನಿ

ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಿಜೆಪಿ ನಾಯಕರು ಹಾಗೂ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಬಂದು ಕೇಸರಿ ನಾಯಕರ ಅಂತಿಮ ದರ್ಶನ ಪಡೆದಿದ್ದಾರೆ.

ಬಿಜೆಪಿ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಬಿಜೆಪಿ ಕಚೇರಿ ಸುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಒಬ್ಬರು ಡಿಸಿಪಿ, 5 ಇನ್ಸ್ ಪೆಕ್ಟರ್, 6 ಸಬ್ ಇನ್ಸ್ ಪೆಕ್ಟರ್, 220 ಪೊಲೀಸ್ ಕಾನ್ಸ್ ಟೇಬಲ್ ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಜನರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಅನಂತ್ ಕುಮಾರ್ ಅವರ ಮೃತದೇಹಕ್ಕೆ ಮಾಲಾರ್ಪಾಣೆ ಮಾಡಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅಶ್ವಿನ್ ಚೌಬೆ , ರಾಮಲಾಲ್, ಮುರಳೀಧರ್ ರಾವ್, ಅನುರಾಗ್ ಠಾಕೋರ್, ಡಿವಿಎಸ್ ಸೇರಿದಂತೆ ಗಣ್ಯರಿಂದ ಅಂತಿಮ ನಮನ ಸಲ್ಲಿಸಿದ್ದಾರೆ. ಒಂದು ಕಡೆ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದರೆ ಇನ್ನೊಂದೆಡೆ ಅನಂತ್ ಕುಮಾರ್ ಅಮರ್ ರಹೇ ಎಂಬ ಘೋಷವಾಕ್ಯಗಳು ಕೇಳಿಬಂದಿತ್ತು.

ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉಸ್ತುವಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಮೂವರು ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ರವಿಕುಮಾರ್, ಅರವಿಂದ ಲಿಂಬಾವಳಿ ಸ್ಥಳದಲ್ಲೇ ಮೇಲ್ವಿಚಾರಣೆ ನಡೆಸಿದ್ದರು.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಸೋಮವಾರ ನಸುಕಿನ ಜಾವ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತದೇಹವನ್ನು ಬೆಂಗಳೂರಿನ ಬಸವನಗುಡಿಯಲ್ಲಿರೋ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ಮುಖಂಡರು ಹಾಗೂ ಗಣ್ಯರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಿನ್ನೆ ಅಂತಿಮ ದರ್ಶನ ಪಡೆದಿದ್ದರು. ಇಂದು ಮಧ್ಯಾಹ್ನ ಚಾಮರಾಜ ಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಬಿಜೆಪಿ ಕಚೇರಿಯಿಂದ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ಇದೀಗ ನ್ಯಾಷನಲ್ ಕಾಲೇಜ್ ನತ್ತ ತೆರಳುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *