Connect with us

Bengaluru City

ಕುಮಾರಸ್ವಾಮಿಯ ಚಿಲ್ಲರೆ ಆಟ ನಡೆಯಲ್ಲ- ಕೋಟ ಶ್ರೀನಿವಾಸ ಪೂಜಾರಿ

Published

on

ಉಡುಪಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಚಿಲ್ಲರೆ ಆಟ ನಡೆಯಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಆಗಿರಲಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ಚಿಲ್ಲರೆ ಆಟಗಳು ನಡೆಯವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಕಡಿವಾಣ ಹಾಕುವುದಾಗಿ ಸಿಎಂ ಹೇಳಿಕೆ ವಿಚಾರ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಯಿಂದ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಯಾಗಿದೆ. 350ಕ್ಕೂ ಅಧಿಕ ಸ್ಥಾನ ಪಡೆಯುವ ನಮ್ಮ ನಿರೀಕ್ಷೆ ನಿಜವಾಗಿದೆ. ದೇಶದಲ್ಲಿ ಮಹಾಮೈತ್ರಿ ನುಚ್ಚುನೂರಾಗಲಿದೆ. ಕರ್ನಾಟಕದಲ್ಲಿ 22ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಕೂಟದಲ್ಲಿ ಚುನಾವಣೆ ಸಂದರ್ಭದಲ್ಲೇ ಬಿರುಕಾಗಿದೆ. ಆಂತರಿಕ ಭಿನ್ನಾಭಿಪ್ರಾಯ ಪರಾಕಾಷ್ಟೆಗೆ ಮುಟ್ಟುತ್ತದೆ. ರಾಜ್ಯದಲ್ಲಿ ಮೈತ್ರಿಕೂಟ ಛಿದ್ರವಾಗಲಿದೆ. ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿಯವರು ರಾಜಕೀಯದಲ್ಲಿ ಹಿರಿಯರಾಗಿದ್ದಾರೆ. ಮೈತ್ರಿ ಕೂಟ ಬದುಕಲ್ಲ ಅನ್ನೋದು ಅವರಿಗೆ ಅರ್ಥ ಆಗಿದೆ. ಜನರ ಅಭಿಪ್ರಾಯ ಹೊರಟ್ಟಿಯವರ ಬಾಯಲ್ಲಿ ಬಂದಿದೆ. ಬಿಜೆಪಿ ಸ್ವಂತ ಶಕ್ತಿಯ ಮೇಲೆ 300 ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಈ ದೇಶದ ಮತದಾರರ ಮೇಲೆಯೇ ನಂಬಿಕೆ ಇಲ್ಲ. ದೀದಿಗೆ ಮತಯಂತ್ರದ ಮೇಲೂ ನಂಬಿಕೆ ಇಲ್ಲ. ಅವರು ಗೆದ್ದರೆ ಎಲ್ಲವೂ ಸರಿ ಇದೆ ಎಂದು ಹೇಳುತ್ತಾರೆ. ಸೋಲಿನ ಭೀತಿಯಿಂದ ಮಮತಾ ಬ್ಯಾನರ್ಜಿಗೆ ಈ ಅಪನಂಬಿಕೆ ಮೂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದು ಕಿಡಿಕಾರಿದರು.