Thursday, 14th November 2019

1 ಸ್ಥಾನ ಗೆಲ್ಲದಿದ್ರೂ ಬಿಜೆಪಿ ಈಗ ಸಿಕ್ಕಿಂನಲ್ಲಿ ಅಧಿಕೃತ ವಿರೋಧ ಪಕ್ಷ

ನವದೆಹಲಿ: ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳದ ಬಳಿಕ ಈಗ ಸಿಕ್ಕಿಂನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಸಿಕ್ಕಿಂ ಪ್ರಜಾಸತ್ತಾತ್ಮಕ ಒಕ್ಕೂಟ(ಎಸ್‍ಡಿಎಫ್)ನ 10 ಶಾಸಕರು ಇಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಈ ಮೂಲಕ ಎಸ್‍ಡಿಎಫ್ ನಾಯಕ ಹಾಗೂ ಸಿಕ್ಕಿಂ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರಿಗೆ ಶಾಸಕರು ಶಾಕ್ ನೀಡಿದ್ದಾರೆ. ಪವನ್ ಕುಮಾರ್ ಚಾಮ್ಲಿಂಗ್ ಅವರು ಸಿಕ್ಕಿಂ ಮತ್ತು ಭಾರತದ ದೀರ್ಘಾವಧಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. ಈ ವರೆಗೆ ಇವರ ನಾಯಕತ್ವದಲ್ಲಿ ಎಸ್‍ಡಿಎಫ್ ಪಕ್ಷವು ಹೆಚ್ಚು ಸ್ಥಾನ ಗಳಿಸಿತ್ತು.

ಇದೀಗ ಹತ್ತು ಎಸ್‍ಡಿಎಫ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯನಿರ್ವಾಹಕ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ಇಲ್ಲಿಯವರೆಗೆ ಈಶಾನ್ಯ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿರುವ ಏಕೈಕ ರಾಜ್ಯ ಸಿಕ್ಕಿಂ ಆಗಿತ್ತು. ಈಶಾನ್ಯ ಭಾರತದ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ತನ್ನ ಬಲವನ್ನು ಇಮ್ಮಡಿಗೊಳಿಸಲು ರಚಿಸಿರುವ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ(ನೆಡಾ) ಮೂಲಕ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ.

ಸಿಕ್ಕಿಂ ಒಟ್ಟು 32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 2019ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕುಮಾರ್ ಚಾಮ್ಲಿಂಗ್ ನೇತೃತ್ವದ ಎಸ್‍ಡಿಎಫ್ 15 ಸ್ಥಾನಗಳಲ್ಲಿ ಜಯಗಳಿಸಿತ್ತು. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‍ಕೆಎಂ) 17 ಸ್ಥಾನಗಳಲ್ಲಿ ಜಯಗಳಿಸಿತ್ತು.

ಈಗ ಎಸ್‍ಡಿಎಫ್‍ನ 10 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಅವರ ಸದಸ್ಯರ ಸಂಖ್ಯೆ ಕೇವಲ ಮೂರಕ್ಕೆ ಕುಸಿದಿದೆ. ಇಬ್ಬರು ಎಸ್‍ಡಿಎಫ್ ಶಾಸಕರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಹೀಗಾಗಿ ಎರಡು ಕ್ಷೇತ್ರಗಳು ಖಾಲಿ ಇವೆ. ಈ ಮೂಲಕ ಎಸ್‍ಡಿಎಫ್ ಸಿಕ್ಕಿಂ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆದಂತಾಗಿದೆ.

ಮೂರನೇ ಒಂದರಷ್ಟು ಶಾಸಕರು ಪಕ್ಷವನ್ನು ತ್ಯಜಿಸಿದರೆ ಆ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ. ಶಾಸಕರು ಸೇರ್ಪಡೆಯಾದ ನಂತರ ಮಾತನಾಡಿದ ರಾಮ್ ಮಾಧವ್, ಬಿಜೆಪಿ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ತಿಳಿಸಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿ ಶೇ.1.62 ರಷ್ಟು ಮತವನ್ನು ಪಡೆದಿತ್ತು. ಸದ್ಯ ಸಿಕ್ಕಿಂ ವಿಧಾನಸಭೆಯಲ್ಲಿ ಬಿಜೆಪಿಯ 10, ಎಸ್‍ಕೆಎಂ ಪಕ್ಷದ 17, ಎಸ್‍ಡಿಎಫ್ ಪಕ್ಷದ 3 ಶಾಸಕರಿದ್ದರೆ ಎರಡು ಸ್ಥಾನ ಖಾಲಿಯಿದೆ.

Leave a Reply

Your email address will not be published. Required fields are marked *