Saturday, 14th December 2019

ರೂಂಗೆ 40 ಕೋಟಿ ತಂದು ಆಫರ್ – ಬಿಜೆಪಿ ವಿರುದ್ಧ ಶಾಸಕ ಮಹಾದೇವ್ ಬಾಂಬ್

ಮೈಸೂರು: ಬಿಜೆಪಿಗೆ ಸೇರಲು ನನಗೆ 30 – 40 ಕೋಟಿ ಆಫರ್ ನೀಡಿದ್ದರು ಎಂದು ಹೇಳುವ ಮೂಲಕ ಪಿರಿಯಾಪಟ್ಟಣ ಶಾಸಕ ಮಹದೇವು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹಾದೇವು ಅವರು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಬಿಜೆಪಿಗೆ ಬರಲು 80 ಕೋಟಿ ಕೇಳಿದ್ದಾರೆ ಎಂದು ತಿಳಿಸಿದ್ದಾರೆ. ಶಾಸಕರ ಈ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಹಾದೇವ್ ಹೇಳಿದ್ದೇನು?
ನನ್ನ ಎದುರೆ 80 ಕೋಟಿ ರೂ. ಹಣ ತಂದು ಇಟ್ಟರೆ ನಿಮ್ಮ ಜೊತೆ ಇರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟ. ನಮಗೂ 30-40 ಕೋಟಿ ತಂದು ರೂಮಿನಲ್ಲಿ ಇಟ್ಟಿದ್ದರು. ಆಗ ನಾನು ಹಣ ತೆಗೆದುಕೊಂಡು ಹೋಗುತ್ತಿರೋ ಅಥವಾ ಎಸಿಬಿಗೆ ತಿಳಿಸಬೇಕೋ ಎಂದು ಎಚ್ಚರಿಕೆ ನೀಡಿದೆ ಎಂದ ತಿಳಿಸಿದೆ.

ಮೂರು ಬಾರಿ ಹಣ ತಂದಿದ್ದರು. ನಾವು ಸತ್ತಾಗ ಮಣ್ಣು ಹಾಕಿಕೊಂಡು ಹೋಗೋದು, ಹಣ ತೆಗೆದುಕೊಂಡು ಹೋಗಲ್ಲ. ಹೀಗಾಗಿ ಹಣಕ್ಕೆ ನಮ್ಮ ಶರೀರವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬುದು ನಮ್ಮ ನಿರ್ಧಾರವಾಗಿದೆ. ಇಲ್ಲವೆಂದಲ್ಲಿ ನಾವು 40 ಕೋಟಿ ತೆಗೆದುಕೊಂಡು ಪಿರಿಯಾ ಪಟ್ಟಣವನ್ನು ಬಿಟ್ಟು ನೆಮ್ಮದಿಯಾಗಿ ಹೋಗಿ ಜೀವನ ಮಾಡಬಹುದಿತ್ತು. ಹೀಗಾಗಿ ಕಲುಷಿತ ರಾಜಕರಾಣ ಮಾಡಿಬಿಟ್ಟಿದೆ. ಅದಕ್ಕೆ ಯುವಕರು ತಲೆ ಕೊಡೋದು ಬೇಡ ಎಂದು ಹೇಳಿದರು.

ಒಟ್ಟಿನಲ್ಲಿ ಒಂದೆಡೆ ಸಿಎಂ ಅಮೆರಿಕಕ್ಕೆ ತೆರಳಿದ್ದರೆ, ಇತ್ತ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಈ ಮಧ್ಯೆ ಶಾಸಕರು ಹೊಸ ವಿಚಾರವೊಂದನ್ನು ಬಾಯಿ ಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *