Tuesday, 10th December 2019

ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆ: ಟಿಎಂಸಿ ಕೈವಾಡದ ಆರೋಪ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕಾಶೀನಾಥ್ ಘೋಷ್ (45) ಕೊಲೆಯಾದ ಬಿಜೆಪಿ ಕಾರ್ಯಕರ್ತ. ಕಾಶೀನಾಥ್ ಟಿಎಂಸಿ ಕಾರ್ಯಕರ್ತ ಲಾಲ್‍ಚಂದ್ ಬಾಗ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಾಶೀನಾಥ್ ಇಂದು ಹೂಗ್ಲಿ ಜಿಲ್ಲೆಯ ಗೋಘಾಟ್ ಪ್ರದೇಶದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ನಕುಂದಾ ಎಂಬ ಪ್ರದೇಶದಲ್ಲಿ ಜುಲೈ 22ರಂದು ಲಾಲ್‍ಚಂದ್ ಕೊಲೆಯಾಗಿದ್ದ. ಈ ಪ್ರಕರಣದಲ್ಲಿ ಕಾಶೀನಾಥ್ ಭಾಗಿಯಾಗಿದ್ದ ಎಂದು ಟಿಎಂಸಿ ಗಂಭೀರವಾಗಿ ಆರೋಪಿಸಿತ್ತು. ಆದರೆ ಬಿಜೆಪಿ ನಾಯಕರು ಆರೋಪವನ್ನು ತಳ್ಳಿ ಹಾಕಿ, ನಿಜವಾದ ಹಂತಕರನ್ನು ರಕ್ಷಿಸಲು ಟಿಎಂಸಿ ನಾಯಕರು ಹೀಗೆ ಆರೋಪಿಸುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಕಾಶೀನಾಥ್ ಶವವಾಗಿ ಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಂಗಾಳ ಬಿಜೆಪಿಯು, ಅರಂಬಾಗ್‍ನ ಬಿಜೆಪಿ ಬೂತ್ ಅಧ್ಯಕ್ಷ ಕಾಶೀನಾಥ್ ಘೋಷ್ ಅವರನ್ನು ಟಿಎಂಸಿ ಗೂಂಡಾಗಳು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.44ರಷ್ಟು ಮತ ಗಳಿಸಿದೆ. ಬಿಜೆಪಿ ನಾಯಕರ ಪಟ್ಟಿ ಸಿದ್ಧಪಡಿಸಿರುವ ಟಿಎಂಸಿ ಈ ಕೃತ್ಯ ಎಸಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪರ ಬರುವ ಫಲಿತಾಂಶ ತಡೆಯಲು ಸಾಧ್ಯವಿಲ್ಲ. ಹುತಾತ್ಮ ಸಂಖ್ಯೆ 74 ಎಂದು ಬರೆದುಕೊಂಡಿದೆ.

ಕಾಶೀನಾಥ್ ದೇಹದ ಮೇಲೆ ಗಾಯಗಳು ಕಂಡು ಬಂದಿದ್ದು, ಪ್ರಾಥಮಿಕ ವದಿಯ ಪ್ರಕಾರ ಇದೊಂದು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಗೋಘಾಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಸಮೀರ್ ಡೇ ತಿಳಿಸಿದ್ದಾರೆ.

Leave a Reply

Your email address will not be published. Required fields are marked *