Connect with us

ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

ಕಾರು ಡಿಕ್ಕಿ ಬೈಕ್ ಸವಾರ ಸಾವು- ವಾಟ್ಸಪ್ ಸ್ಟೇಟಸ್ ಹುಟ್ಟಿಸಿತಾ ವೈಷಮ್ಯ?

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷರ ಕಾರು ಡಿಕ್ಕಿಯಾಗಿ ಗ್ರಾಮಸ್ಥರೋರ್ವರು ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಇದು ಅಪಘಾತವಲ್ಲ ಕೊಲೆ ಎಂಬ ಆರೋಪ ಗ್ರಾಮಸ್ಥರಲ್ಲಿ ಕೇಳಿ ಬಂದಿದೆ.

ಕುಂದಾಪುರ ತಾಲೂಕು ಯಡಮೊಗೆ ಗ್ರಾಮ ಪಂಚಾಯತ್‍ನ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಅವರ ಕಾರು, ಇದೇ ಗ್ರಾಮದ ಉದಯ ಗಾಣಿಗ ಎಂಬವರ ಬೈಕ್ ನಡುವೆ ಅಪಘಾತವಾಗಿತ್ತು. ಬಳಿಕ ಕಾರಿನಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದರು. ಅಪಘಾತದಲ್ಲಿ ಗಾಯಗೊಂಡ ಉದಯ ಗಾಣಿಗರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಅಂಬುಲೆನ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇದು ಅಪಘಾತ ಅಲ್ಲ ಕೊಲೆ ಎಂದು ಗ್ರಾಮದಲ್ಲಿ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕಾಪು ಜನರಿಗೆ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ

ಕೊಲೆ ಆರೋಪ ಬರಲು ಕಾರಣ?
ಎಡಮೊಗೆ ಗ್ರಾಮದಲ್ಲಿ ಐವತ್ತಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಇರುವುದರಿಂದಾಗಿ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಬೆನ್ನಲ್ಲೇ ಪೊಲೀಸರು ಗ್ರಾಮದ ಸುತ್ತ ಬ್ಯಾರಿಕೇಡ್ ಇಟ್ಟು ನಾಕಾಬಂದಿ ಹಾಕಿದ್ದರು. ಅಧ್ಯಕ್ಷರು ಮತ್ತು ಅವರ ಬೆಂಬಲಿಗರು ಗ್ರಾಮಕ್ಕೆ ಪ್ರವೇಶ ಮಾಡುವ ಪ್ರಮುಖ ರಸ್ತೆಯಲ್ಲಿ ಪೊಲೀಸರು ಇರಿಸಿದ್ದ ಬ್ಯಾರಿಕೇಡ್ ಸಮೀಪ ಕೂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಬೆಳವಣಿಗೆ ನಂತರ ಉದಯ ಗಾಣಿಗ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದರು.

ಗಾಣಿಗರ ಸ್ಟೇಟಸ್ ಏನಿತ್ತು?
ಎರಡು ದಿನಗಳ ಹಿಂದೆ ಸ್ಟೇಟಸ್ ನಲ್ಲಿ ‘ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ’. ‘ಲಾಕ್ ಡೌನ್ ಮಾಡಿ ಪೋಸು ಕೊಡಬೇಡಿ’. ‘ಕೊರೋನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ’ ಅಂತ ಉದಯ ಗಾಣಿಗ ಅವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದು ಪ್ರಾಣೇಶ್ ಯಡಿಯಾಳ್ ವಿರುದ್ಧ ಎಂದು ಗ್ರಾಮದಲ್ಲಿ ಚರ್ಚೆಯಾಗಿತ್ತು.

ಶನಿವಾರ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗರ ಬೈಕ್‍ಗೆ ಪ್ರಾಣೇಶ್ ಯಡಿಯಾಳ್ ಅವರ ಕಾರು ಡಿಕ್ಕಿಯಾಗಿದೆ. ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಕಾರುಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಪ್ರಾಣೇಶ್ ಯಡಿಯಾಳ್ ಇರಲಿಲ್ಲ ಎಂಬ ಬಗ್ಗೆಯೂ ಮಾಹಿತಿಯಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement