Chikkamagaluru
ಜಾತ್ರೆಗೆ ಹೋಗುತ್ತಿದ್ದ ಬೈಕ್ಗಳ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಜಾತ್ರೆಗೆ ಹೋಗುತ್ತಿದ್ದ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 28 ವರ್ಷದ ಕಿರಣ್ ನಾಯ್ಕ ಹಾಗೂ 35 ವರ್ಷದ ಬಸವರಾಜ್ ನಾಯ್ಕ ಎಂದು ಗುರುತಿಸಲಾಗಿದೆ. ಕಿರಣ್ ನಾಯ್ಕ್ ತರೀಕೆರೆ ತಾಲೂಕಿನ ನಾಗೇನಹಳ್ಳಿ ನಿವಾಸಿ. ಬಸವರಾಜ್ ನಾಯ್ಕ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನಿವಾಸಿ. ಕಿರಣ್ ನಾಯ್ಕ್ ನಾಗೇನಹಳ್ಳಿ ಗ್ರಾಮದಿಂದ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಅಂತರಗಟ್ಟೆ ಜಾತ್ರೆಗೆ ಬರುತ್ತಿದ್ದ. ಬಸವರಾಜ್ ನಾಯ್ಕ ಪತ್ನಿ ಜೊತೆ ಅಜ್ಜಂಪುರದಿಂದ ತರೀಕೆರೆಯ ಕೋಡಿಕ್ಯಾಂಪ್ಗೆ ಹೋಗುತ್ತಿದ್ದರು. ಈ ವೇಳೆ ಅಜ್ಜಂಪುರ ತಾಲೂಕಿನ ಸೊಕ್ಕೆ ಬಳಿ ಎರಡೂ ಬೈಕ್ಗಳು ವೇಗವಾಗಿದ್ದ ಕಾರಣ ಮುಖಮುಖಾ ಡಿಕ್ಕಿಯಾಗಿ ಕಿರಣ್ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಬಸವರಾಜ್ ನಾಯ್ಕ ಆಸ್ಪತ್ರೆಗೆ ಸಾಗಿಸಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಬಸವರಾಜ್ ನಾಯ್ಕನ ಜೊತೆ ಬೈಕಿನಲ್ಲಿ ಹಿಂದೆ ಕೂತಿದ್ದ ಮಹಿಳೆಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರರು ಇಬ್ಬರೂ ತಲೆಗೆ ಹೆಲ್ಮೆಟ್ ಧರಿಸದೇ ಇದ್ದದ್ದೇ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಅಪಘಾತವಾದ ಕೂಡಲೇ ಇಬ್ಬರೂ ಬೈಕ್ ಸವಾರರ ತಲೆಗೆ ತೀವ್ರವಾದ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಅಜ್ಜಂಪುರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
