Connect with us

Bengaluru City

ಮಹಿಳೆಯರಿಂದ ಬಿಹಾರ ಲೆಕ್ಕಾಚಾರ ಉಲ್ಟಾ – ಮತ್ತೆ ಅಧಿಕಾರಕ್ಕೆ ಎನ್‍ಡಿಎ

Published

on

– ಮೋದಿ ಸರ್ಕಾರದ ಸಾಧನೆಗೆ ಬಿತ್ತು ವೋಟು
– ಸೈಲೆಂಟ್ ವೋಟರ್ಸ್ ಕಮಾಲ್, ಕಾಂಗ್ರೆಸ್ ಧೂಳೀಪಟ

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಈ ಬಾರಿ ನಿತೀಶ್ ಕುಮಾರ್ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಹೀನಾಯವಾಗಿ ಸೋಲುತ್ತದೆ ಎಂದು ಹಲವಾರು ಸಮೀಕ್ಷೆಗಳು ಹೇಳಿತ್ತು. ಆದರೆ ಮತ ಫಲಿತಾಂಶ ಬಂದಾಗ ಸಮೀಕ್ಷೆಗಳು ಉಲ್ಟಾವಾಗಿದೆ. ಎನ್‍ಡಿಎ ಮೈತ್ರಿಕೂಟ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಿದೆ. ಜೆಡಿಯುಗೆ ಹಿನ್ನಡೆಯಾಗಿದ್ದರೂ ಬಿಜೆಪಿ ನೆರವಿನಿಂದ ನಿತೀಶ್ ಕುಮಾರ್ ಮೂರನೇ ಬಾರಿ ಅಧಿಕಾರಕ್ಕೆ ಏರಲು ಕಾರಣವಾಗಿದ್ದು ಮಹಿಳೆಯರ ಮತಗಳು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಹೌದು. ಪ್ರತಿಬಾರಿ ಬಿಹಾರ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕುತ್ತಿದ್ದದ್ದಾರೆ. ಈ ಮತಗಳು ಬಿಜೆಪಿ, ನಿತೀಶ್ ಪರವಾಗಿ ಬೀಳುತ್ತಿರುವುದರಿಂದ ಎನ್‍ಡಿಎ ಮೈತ್ರಿಕೂಟಕ್ಕೆ ವರವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

2010ರಲ್ಲಿ ಮಹಿಳೆಯರು ಶೇ.54.5ರಷ್ಟು ಮತದಾನ ಮಾಡಿದ್ದರೆ ಪುರುಷರು ಶೇ.51.1 ರಷ್ಟು ಮತದಾನ ಮಾಡಿದ್ದರು. 2015ರಲ್ಲಿ ಮಹಿಳೆಯರು ಶೇ.60.5 ರಷ್ಟು ಮತದಾನ ಮಾಡಿದ್ದರೆ ಪುರುಷರು ಶೇ.53.3ರಷ್ಟು ಮತದಾನ ಮಾಡಿದ್ದರು. ಈ ಬಾರಿ ಶೇ.59.4ರಷ್ಟು ಮಹಿಳೆಯರು ಮತದಾನ ಮಾಡಿದ್ದರೆ ಶೇ.54.7ರಷ್ಟು ಪುರುಷರು ಮತದಾನ ಮಾಡಿದ್ದಾರೆ.

ಒಟ್ಟು ಮೂರು ಹಂತದಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿ ಶೇ.57.5ರಷ್ಟು ಮತದಾನ ನಡೆದಿದೆ. 2015ರ ಶೇ.56.6ರಷ್ಟು ಮತದಾನ ನಡೆದಿತ್ತು. ಅದರಲ್ಲೂ ವಿಶೇಷವಾಗಿ 11 ವಿಧಾನಸಭಾ ಕ್ಷೇತ್ರದಲ್ಲಿ ಶೇ.70 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡಿದ್ದರೆ, 141 ಕ್ಷೇತ್ರದಲ್ಲಿ ಶೇ.60ಕ್ಕೂ ಹೆಚ್ಚು ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡಿದ್ದರು.

ಇದನ್ನೇ  ಪುರುಷ ಮತದಾರರಿಗೆ ಹೋಲಿಕೆ ಮಾಡಿದರೆ 37 ಕ್ಷೇತ್ರಗಳಲ್ಲಿ ಶೇ.60 ರಷ್ಟು ಪುರುಷರು ಮತದಾನ ಮಾಡಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಶೇ.70ಕ್ಕಿಂತ ಹೆಚ್ಚಿನ ಮತದಾನ ಪುರುಷರಿಂದ ನಡೆದಿಲ್ಲ.

ಸಾಧಾರಣವಾಗಿ ಲೋಕಸಭಾ ಚುನಾವಣೆ ಬಂದಾಗ ದೇಶದ ವಿಚಾರಗಳು, ಅಂತಾರಾಷ್ಟ್ರೀಯ ವಿಚಾರಗಳು ಜಾಸ್ತಿ ಚರ್ಚೆ ಆಗುತ್ತದೆ. ವಿಧಾನಸಭಾ ಚುನಾವಣೆ ಬಂದಾಗ ರಾಜ್ಯದ ವಿಷಯಗಳೇ ನಾಯಕರ ಪ್ರಚಾರ ಭಾಷಣದಲ್ಲಿ ಇರುತ್ತದೆ. ಆದರೆ ಈ ಬಾರಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ಸಾಧನೆಗಿಂತ ಹೆಚ್ಚಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನೇ ತಿಳಿಸುತ್ತಾ ಹೋದರು. ಈ ಪ್ರಚಾರ ತಂತ್ರ ಮಹಿಳೆಯರನ್ನು ಸೆಳೆದಿದ್ದು ಬಿಜೆಪಿಗೆ ವೋಟು ಬಿದ್ದಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಸಾಧನೆಯನ್ನೇ ಜಾಸ್ತಿ ಪ್ರಚಾರ ಮಾಡಿದ್ದರು. ಈ ಕಾರಣದಿಂದಲೇ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಹಾರ ಚುನಾವಣೆಗೆ ತೆರಳಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಮಹಿಳೆಯರ ಪಾತ್ರದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಬಿಹಾರ ಚುನಾವಣೆಯ ಸಮಯದಲ್ಲಿ ಸಮಾವೇಶದಲ್ಲಿ ರಸ್ತೆ ಪ್ರಚಾರದ ವೇಳೆ ಮಹಿಳೆಯರು ಮಾಧ್ಯಮಗಳಲ್ಲಿ ಕಾಣಿಸಿರಲಿಲ್ಲ. ಆದರೆ ಈ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿಯವರ ಅತಿ ದೊಡ್ಡ ಬೆಂಬಲಿಗರು. ಉಚಿತ ಗ್ಯಾಸ್ ಸೌಲಭ್ಯ, ಟ್ಯಾಪ್ ನೀರಿನ ಸೌಲಭ್ಯ, ಮನೆ ನಿರ್ಮಾಣ, ಶೌಚಾಲಯ, 1 ರೂ. ಸ್ಯಾನಿಟರಿ ಪ್ಯಾಡ್.. ಯಾವೊಬ್ಬ ನಾಯಕ ಮಹಿಳೆಯರಿಗೆ ಇಷ್ಟೊಂದು ಕೆಲಸ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ.

ಮಾಧ್ಯಮ ಸಮೀಕ್ಷೆಗಳಲ್ಲಿ ಸಾಧಾರಣವಾಗಿ ಪುರುಷರೇ ಜಾಸ್ತಿ ಭಾಗಿಯಾಗುತ್ತಾರೆ. ಹೀಗಾಗಿ ಮಹಿಳೆಯರ ಅಭಿಪ್ರಾಯ ಸರಿಯಾಗಿ ಸಂಗ್ರಹವಾಗದಿರುವ ಕಾರಣ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗಿದೆ. ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ 75, ಬಿಜೆಪಿ 74, ಜೆಡಿಯು 43, ಕಾಂಗ್ರೆಸ್ 19, ಸ್ಥಾನಗಳನ್ನು ಗೆದ್ದುಕೊಂಡಿದೆ. ಎನ್‍ಡಿಎ ಮೈತ್ರಿಕೂಟ 125, ಮಹಾಮೈತ್ರಿ 110, ಎಲ್‍ಜೆಪಿ 1, ಇತರರರು 7 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *