Connect with us

Latest

ಬಿಹಾರದಲ್ಲಿ ಕ್ಲಿಕ್, ಪಶ್ಚಿಮ ಬಂಗಾಳದಲ್ಲೂ ಸ್ಪರ್ಧೆ – ಕಾಂಗ್ರೆಸ್‍ಗೆ ಓವೈಸಿ ತಿರುಗೇಟು

Published

on

– ಮಹಾರಾಷ್ಟ್ರದಲ್ಲಿ ನೀವು ಶಿವಸೇನೆಯ ತೊಡೆಯ ಮೇಲೆ ಕುಳಿತುಕೊಳ್ಳಬಹುದು
– ನಾವು ಏಕಾಂಗಿಯಾಗಿ ಸ್ಪರ್ಧಿಸಿದರೆ ನಿಮಗೆ ಏನು ಕಷ್ಟ?

ಹೈದರಾಬಾದ್: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿ ಕೂಟ ಬಹುಮತ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಆದರೆ ಅಸಾದುದ್ದಿನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ 5 ಸ್ಥಾನಗಳಲ್ಲಿ ಜಯಗಳಿಸಿ ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ.

ಬಿಹಾರ ಯಶಸ್ಸಿನ ಹಿನ್ನೆಲೆಯಲ್ಲಿ ಮಾತನಾಡಿರುವ ಓವೈಸಿ, ಮುಂದೆ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ತೀರ್ಮಾನಿಸಿದ್ದೇವೆ. ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.

ಈ ಕುರಿತು ಅಸಾದುದ್ದಿನ್ ಓವೈಸಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಬಿಹಾರದ ಸೀಮಾಂಚಲ್ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಐಎಂಐಎಂ ಪಕ್ಷ ಬಿಜೆಪಿ ವಿರೋಧಿ ಮತಗಳನ್ನು ಒಡೆದಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರಾಜಕೀಯ ಪಕ್ಷವನ್ನು ನಡೆಸುತ್ತಿದ್ದೇವೆ. ಹೀಗಾಗಿ ನಮ್ಮ ಸ್ವಂತ ಬಲದಿಂದ ಚುನಾವಣೆಯನ್ನು ಎದುರಿಸುವುದೇ ಸರಿ ಎಂದು ಅಸಾದುದ್ದೀನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

ನೀವು ಮಹಾರಾಷ್ಟ್ರದಲ್ಲಿ ಶಿವಸೇನೆ ತೊಡೆಯ ಮೇಲೆ ಹೋಗಿ ಕುಳಿತುಕೊಳ್ಳಬಹುದು. ಆದರೆ ನಾವು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಾರದೆ ಎಂದು ಕಾಂಗ್ರೆಸ್‍ನ್ನು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ನೀವು ಯಾಕೆ ಸ್ಪರ್ಧಿಸುತ್ತೀರಿ ಎಂದು ಯಾರಾದರೂ ಕೇಳಿದಿರಾ, ಇಲ್ಲ. ನಾವು ಪಶ್ಚಿಮ ಬಂಗಾಳದಲ್ಲೂ ಸ್ಪರ್ಧಿಸುತ್ತೇವೆ. ಉತ್ತರ ಪ್ರದೇಶದಲ್ಲೂ ಸ್ಪರ್ಧಿಸುತ್ತೇವೆ. ಅಲ್ಲದೆ ದೇಶದ ಪ್ರತಿ ಚುನಾವಣೆಯಲ್ಲಿಯೂ ನಾವು ಸ್ಪರ್ಧೆ ಮಾಡುತ್ತೇವೆ ಎಂದು ಓವೈಸಿ ತಿಳಿಸಿದ್ದಾರೆ.

ನಾನು ಚುನಾವಣೆಗೆ ಸ್ಪರ್ಧಿಸಲು ಯಾರದ್ದಾದರೂ ಅಪ್ಪಣೆ ಪಡೆಯಬೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇತರ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರಾ ಅಥವಾ ಕೇವಲ ನಿಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೀರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ. ಯಾರ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಹಿಳೆಯರಿಂದ ಬಿಹಾರ ಲೆಕ್ಕಾಚಾರ ಉಲ್ಟಾ – ಮತ್ತೆ ಅಧಿಕಾರಕ್ಕೆ ಎನ್‍ಡಿಎ

ಎಐಎಂಐಎಂ ಬಿಹಾರ ಚುನಾವಣೆಯಲ್ಲಿ ‘ವೋಟ್ ಕಟ್ಟರ್’ ಆಗಿದೆ ಎಂದು ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆಗೆ ತಿರುಗೇಟು ನೀಡಿದ ಓವೈಸಿ, ಮುಸ್ಲಿಮರ ಕಲ್ಯಾಣಕ್ಕಾಗಿ ನಿಮ್ಮ ಕ್ಷೇತ್ರದಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅಧೀರ್ ರಂಜನ್ ಚೌಧರಿ, ನನ್ನ ಕ್ಷೇತ್ರದಲ್ಲಿನ ಮುಸ್ಲಿಮರ ಸ್ಥಿತಿ ಏನಾಗಿದೆ, ಚೆನ್ನಾಗಿಯೇ ಇದೆ ಎಂದು ಉತ್ತರಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಸಾದುದ್ದೀನ್ ಹಾಗೂ ಎಐಎಂಐಎಂ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸಿವೆ. ಬಿಹಾರ ಚುನಾವಣೆಗಳಲ್ಲಿ ಆರ್‍ಜೆಡಿ ನೇತೃತ್ವದ ಮಹಾಘಟಬಂಧನ್ ಮತಗಳನ್ನು ಕಡಿತಗೊಳಿಸಿದೆ ಎಂದು ಕಿಡಿಕಾರಿವೆ. ಬಿಹಾರ ಚುನಾವಣೆಯಲ್ಲಿ ಒಟ್ಟು 20 ಕ್ಷೇತ್ರಗಳಲ್ಲಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಇದರಲ್ಲಿ ಐದು ಸ್ಥಾನಗಳಲ್ಲಿ ಪಕ್ಷ ಜಯಗಳಿಸಿದ್ದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗಿದೆ.

Click to comment

Leave a Reply

Your email address will not be published. Required fields are marked *