Connect with us

Bengaluru City

ದೊಡ್ಮನೆಯಲ್ಲೂ ಕಿಚ್ಚೆಬ್ಬಿಸಿದ ಕೊರೊನಾ..!

Published

on

ಬೆಂಗಳೂರು: ಇಷ್ಟು ದಿನ ಕೂಲ್ ಆಗಿ ಆಟವಾಡಿದ ಬಿಗ್‍ಬಾಸ್ ಮನೆ ಸದಸ್ಯರ ನಡುವೆ ನಿನ್ನೆ ಆಕ್ರೋಶದ ಕಿಚ್ಚು ಹೊತ್ತಿಕೊಂಡಿದೆ. ವಿಶ್ವದೆಲ್ಲೆಡೆ ಕೇಕೆ ಹಾಕಿದ ಕೊರೊನಾ ಇದೀಗ ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟಿದೆ. ಈ ವಿಚಾರವಾಗಿ ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದು, ಸದ್ಯ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಜಿದ್ದಾ-ಜಿದ್ದಿ ನಡೆಸಿದ್ದಾರೆ.

ನಿನ್ನೆ ಬಿಗ್‍ಬಾಸ್ ಇಡೀ ಜಗತ್ತು ಕಳೆದ ವರ್ಷ ವೈರಸ್‍ನಿಂದ ಕಂಗಲಾಗಿದ್ದು ಎಲ್ಲರೂ ನೋಡಿದ್ದೀರಿ. ಇದೀಗ ನೀವೆಲ್ಲರೂ ಕೊರೊನಾ ವೈಸ್ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಘೋಷಿಸಿದರು. ಅದರಂತೆ ಮನೆಯ ಸದಸ್ಯರನ್ನು ಮನುಷ್ಯ ತಂಡ ಹಾಗೂ ವೈರಸ್ ತಂಡ ಎಂದು ಎರಡು ವಿಭಾಗಗಳಾಗಿ ಮಾಡಲಾಯಿತು. ಲ್ಯಾಂಗ್ ಮಂಜುರನ್ನು ಮನುಷ್ಯ ತಂಡದ ನಾಯಕರಾಗಿ ಹಾಗೂ ಪ್ರಶಾಂತ್ ಸಂಬರಗಿಯನ್ನು ವೈರಸ್ ತಂಡದ ನಾಯಕರಾಗಿ ನೇಮಿಸಿದರು. ಮನುಷ್ಯ ತಂಡದಲ್ಲಿ ಮಂಜು, ಅರವಿಂದ್, ಚಂದ್ರಕಲಾ, ಗೀತಾ, ದಿವ್ಯಾ ಉರುಡುಗ, ಶಮಂತ್ ಶುಭ, ವಿಶ್ವನಾಥ್ ಹಾಗೂ ವೈರಸ್ ತಂಡದ ಸದಸ್ಯರಾಗಿ ಪ್ರಶಾಂತ್, ದಿವ್ಯಾ, ಸುರೇಶ್, ನಿಧಿ, ನಿರ್ಮಲ, ರಾಜೀವ್, ಶಂಕರ್, ರಘು, ವೈಷ್ಣವಿ ಎಂದು ವಿಂಗಡಿಸಲಾಯಿತು.

ಕೊರೊನಾ ಟಾಸ್ಕ್ ಪ್ರಕಟಣೆಯನ್ನು ಓದಿದ ಲ್ಯಾಂಗ್ ಮಂಜು, ಬಿಗ್ ಕ್ಯಾಪ್ಟನ್ಸಿ ಕಂಟೆಂಟರ್ ಟಾಸ್ಕ್‍ವೊಂದನ್ನು ನೀಡುತ್ತಿದ್ದು, ಅದುವೇ ಲಾಕ್‍ಡೌನ್. ಬಜರ್ ಆಗುತ್ತಿದ್ದಂತೆಯೇ ಮನುಷ್ಯರ ಮೇಲೆ ವೈರಸ್ ದಾಳಿ ಮಾಡಬೇಕು. ಮನುಷ್ಯರು ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ದಾಳಿ ಮಾಡಿದಾಗ ವೈರಸ್ ಯಶಸ್ವಿಯಾದಲ್ಲಿ ಮನುಷ್ಯರು ಕ್ವಾರಂಟೈನ್‍ಗೆ ಹೋಗಬೇಕು. ಮನುಷ್ಯ ಕ್ವಾರಂಟೈನ್ ಅವಧಿಯಲ್ಲಿ ವೈರಸ್ ಹಿಂಸೆಯನ್ನು ಸಹಿಸಿಕೊಂಡು ಯಶಸ್ವಿಯಾದರೆ ಅವರು ಉಳಿಯುತ್ತಾರೆ ಎಂದು ತಿಳಿಸಲಾಯಿತು.

ಗಾರ್ಡನ್ ಏರಿಯಾದಲ್ಲಿ 6 ಮನುಷ್ಯಾಕೃತಿಗಳು ಅಂದರೆ ಮ್ಯಾನಿಕ್ವೀನ್‍ಗಳನ್ನು ಇರಿಸಲಾಗಿದೆ. ಈ ಮ್ಯಾನಿಕ್ವೀನ್‍ನ ಎದೆಯ ಭಾಗದಲ್ಲಿ ಎರಡು ಪೌಚ್‍ಗಳನ್ನು ಇರಿಸಲಾಗಿದ್ದು, ಅದು ಮನುಷ್ಯನ ಜೀವಂತಿಕೆಯನ್ನು ಸೂಚಿಸುತ್ತದೆ. ಒಂದು ಮ್ಯಾನಿಕ್ವೀನ್‍ನ ಎರಡು ಪೌಚ್‍ಗಳು ನಾಶವಾದರೆ, ಆ ಮ್ಯಾನಿಕ್ವೀನ್‍ನ ವೈರಸ್ ಸೋಂಕು ತಗುಲಿದಂತೆ ಎಂದರು. ಮ್ಯಾನಿಕ್ವೀನ್ ಮೇಲೆ ದಾಳಿ ಮಾಡಿ ಪೌಚ್ ನಾಶಪಡಿಸಲು ವೈರಸ್ ಬಳಿ 2 ಸ್ಟಾಂಪ್‍ಗಳನ್ನು ನೀಡಲಾಗಿರುತ್ತದೆ. ಈ ಸ್ಟಾಂಪ್‍ಗಳನ್ನು ಬಳಸಿ ವೈರಸ್ ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸಬೇಕು. ಮ್ಯಾನಿಕ್ವೀನ್ ಸುತ್ತ ಕೆಂಪು ಹಾಗೂ ಹಳದಿ ಬೌಂಡರಿಗಳನ್ನು ಇರಿಸಲಾಗಿದ್ದು, ವೈರಸ್ ಹಳದಿ ಬಣ್ಣದ ಬೌಂಡರಿಯನ್ನು ದಾಟದಂತೆ ನೋಡಿಕೊಳ್ಳಬೇಕು. ಹಳದಿ ಬಣ್ಣ ಬೌಂಡರಿ ದಾಟಿ ಕೆಂಪು ಬೌಂಡರಿ ಒಳಗೆ ಹೋದರೆ ಆಗ ಮ್ಯಾನಿಕ್ವೀನ್ ಪೌಚ್‍ಗಳನ್ನು ನಾಶ ಮಾಡಬಹುದು ಎಂದು ಸೂಚಿಸಲಾಯಿತು.

ಅದರಂತೆ ಮೊದಲ ಬಜಾರ್ ಆದಾಗ ಆಟ ಶುರು ಮಾಡಿದ ಎರಡು ತಂಡ ಕಾದಾಡುತ್ತಾ, ಒಬ್ಬರಿಗೊಬ್ಬರು ತಳ್ಳಾಡುತ್ತಾ, ಕಿರುಚಾಡುತ್ತಾ ಜಗಳ ಮಾಡಿದರು. ಕೊನೆಗೆ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ನನ್ನು ವಶಪಡಿಸಿಕೊಂಡು ಗೆಲ್ಲುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಕಾಲನ್ನು ಬಳಸಿ ಒದ್ದಿದ್ದಕ್ಕೆ ರಘು ಕಿಡಿಕಾರಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ವೈರಸ್ ತಂಡ ಸ್ಟಾಂಪ್‍ಗಳನ್ನು ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಸೋತ ಮನುಷ್ಯ ತಂಡದಿಂದ ಚಂದ್ರಕಲಾ ಕ್ವಾರಂಟೈನ್‍ಗೆ ಬಂದರು. ಈ ವೇಳೆ ಹಗ್ಗದ ಮೇಲೆ ಕೈ ಇರಿಸಿದ್ದ ಚಂದ್ರಕಲಾ ಕೈ ಬಿಡಿಸಲು ವೈರಸ್ ತಂಡ ಬಟ್ಟೆಗಳ ರಾಶಿಯನ್ನು ಹಾಕಿದರು. ಮೈ ಮೇಲೆ ತಣ್ಣೀರು ಸುರಿದರು. ಅಲ್ಲದೆ ತಪ್ಪಲೆಯನ್ನು ಸೌಟಿನಿಂದ ಬಡಿಯುವ ಮೂಲಕ ಸದ್ದು ಮಾಡಿ ಕಿರಿಕಿರಿ ಮಾಡಿದರು. ಆದರೂ ದೃಢಗೆಡದೆ ಚಂದ್ರಕಲಾ ಅರ್ಧಗಂಟೆ ನಿಂತು ಕೊರೊನಾ ಗೆದ್ದು ಬಂದರು. ಈ ವೇಳೆ ಚಂದ್ರಕಲಾಗೆ ವೈರಸ್ ತಂಡ ನೀಡಿದ ಹಿಂಸೆಯನ್ನು ಖಂಡಿಸಿ ಮನುಷ್ಯ ತಂಡದವರು ಆಕ್ರೋಶ ವ್ಯಕ್ತಪಡಿಸಿದರು.

ಮೂರನೇ ಸುತ್ತಿನಲ್ಲಿ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ನನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡು ಗೆದ್ದರು. ಈ ವೇಳೆ ನಿರ್ಮಲರವರ ಕತ್ತಿಗೆ ಪೆಟ್ಟಾಗಿ ಅವರನ್ನು ಮನೆಯ ಸದಸ್ಯರು ಕಾನ್ಫೆಷನ್ ರೂಮ್‍ಗೆ ಚಿಕಿತ್ಸೆಗಾಗಿ ಕರೆದೊಯ್ದರು. ಬಳಿಕ ಮನುಷ್ಯ ತಂಡ ಆಟದ ನಿಯಮ ಉಲ್ಲಂಘಿಸಿ ವೈರಸ್ ತಂಡದೊಂದಿಗೆ ಸ್ನೇಹದಿಂದ ನಡೆದುಕೊಂಡಿದ್ದರಿಂದ ಮನುಷ್ಯ ತಂಡದ ಕ್ಯಾಪ್ಟನ್ ಮಂಜು, ಶುಭ ಹಾಗೂ ಚಂದ್ರಕಲಾ ಆಟದಿಂದ ಹೊರ ನಡೆದರು.

ನಂತರ ನಾಲ್ಕನೇ ಸುತ್ತಿನಲ್ಲಿ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ಗಳನ್ನು ಮತ್ತೊಮ್ಮೆ ವಶಪಡಿಸಿಕೊಂಡರು ಆದರೂ ಹಠ ಬಿಡದ ವೈರಸ್ ತಂಡ ಸ್ಟಾಂಪ್‍ಗಳನ್ನು ಕಿತ್ತುಕೊಂಡು ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸಿ ಜಯಶಾಲಿಯಾದರು. ಈ ವೇಳೆ ಬ್ರೋಗೌಡ ಪ್ರಶಾಂತ್‍ರಿಂದ ಹಾನಿಗೊಂಡಿರುವುದಾಗಿ ಆರೋಪಿಸಿ ಇಬ್ಬರು ಜಗಳವಾಡಿದರು. ಇದರಿಂದ ಮಾತಿಗೆ ಮಾತು ಬೆಳಸಿದ ಬ್ರೋ ಗೌಡ ಪ್ರಶಾಂತ್ ಸಂಬರಗಿಯವರಿಗೆ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ನಿಂದಿಸಿದರು.

ಈ ಸುತ್ತಿನಲ್ಲಿ ಮನುಷ್ಯ ತಂಡ ಸೋತ್ತಿದ್ದರಿಂದ ಗೀತಾ ಕ್ವಾರಂಟೈನ್‍ಗೆ ಬಂದರು. ಅವರ ಕೈಗಳನ್ನು ಹಗ್ಗದ ಮೇಲಿನಿಂದ ಬಿಡಿಸಲು ವೈರಸ್ ತಂಡ ಹಲವಾರು ರೀತಿ ಸರ್ಕಸ್ ನಡೆಸಿತು. ಆದರೆ ಕೊನೆಗೆ ಬಟ್ಟೆಗಳಿಗೆ ಡಾಂಬಲ್ಸ್‍ಗಳನ್ನು ಕಟ್ಟಿ ಗೀತಾ ಕೈ ಮೇಲೆ ಹಾಕಿದರು. ಹೀಗಾಗಿ ಡಾಂಬಲ್ಸ್ ತೂಕ ತಡಯಲಾರದೇ ಗೀತಾ ಕೊನೆಗೆ ಹಗ್ಗದ ಮೇಲಿನಿಂದ ಕೈ ಬಿಟ್ಟು ವೈರಸ್‍ಗೆ ಶರಣಾದರು.

ಒಟ್ಟಾರೆ ಇಷ್ಟು ದಿನ ವಿಶ್ವದಲ್ಲೆಲ್ಲಾ ಅಬ್ಬರಿಸಿದ್ದ ಕೊರೊನಾ ಇದೀಗಾ ಬಿಗ್‍ಬಾಸ್ ಮನೆ ಮಂದಿ ಮದ್ಯೆ ಮನಸ್ತಾಪ, ಕಾದಾಟ, ಆಕ್ರೋಶದ ಕಿಚ್ಚು ಹೊತ್ತಿಸಿದೆ ಎಂದರೆ ತಪ್ಪಾಗಲಾರದು.

Click to comment

Leave a Reply

Your email address will not be published. Required fields are marked *