Tuesday, 23rd July 2019

ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು

– ಖಾಸಗಿ ವಾಹಿನಿಯ ಶೋನಲ್ಲಿಯೂ ಆ್ಯಂಡಿಯಿಂದ ಕಿರುಕುಳ

ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ನಗರದ ಕೆ.ಜಿ.ರಸ್ತೆಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತಾಯಿಯ ಜೊತೆಗೆ ಹೋಗಿ ಕವಿತಾ ಅವರು ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದೆ ಎಂದರು.

ಪ್ರೋಗ್ರಾಂ ಪ್ರೊಡ್ಯೂಸರ್ ಗುರುದಾಸ್ ಶಣೈ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಉಂಟಾಗಿದ್ದ ಅಹಿತಕರ ಘಟನೆಯ ಕುರಿತು ಹೇಳಿಕೊಂಡು ದೂರು ನೀಡುವ ವಿಚಾರವನ್ನು ಗುರುದಾಸ್ ಶಣೈ ತಿಳಿಸಿದ್ದೆ. ಅವರು ಕೂಡ ಬೆಂಬಲ ಕೊಡುತ್ತೇವೆಂದು ತಿಳಿಸಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಬಂದು ಯೋಜನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರುವೆ ಎಂದು ಸ್ಪಷ್ಟನೆ ನೀಡಿದರು.

ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟುಮಾಡಿತು ಎಂದರು.

ಬಿಗ್‍ಬಾಸ್ ಮನೆಯಲ್ಲಿ ದೂರು ನೀಡದ ಕುರಿತು ಪ್ರತಿಕ್ರಿಯೆ ನೀಡಿದ ಕವಿತಾ, ಸ್ಪರ್ಧಿಗಳ ಪ್ರತಿ ಚಲನವಲವನ್ನು ನಟ ಸುದೀಪ್, ಗುರುದಾಸ್ ಶಣೈ, ಪರಮೇಶ್ ಗುಂಡಕಲ್ ಅವರನ್ನು ಒಳಗೊಂಡಂತೆ ಬಿಗ್‍ಬಾಸ್ ಮನೆ ಸಿಬ್ಬಂದಿ ನೋಡುತ್ತಿರುತ್ತಾರೆ. ಕೆಲವು ಬಾರಿ ಕನ್ಫೆಷನ್ ರೂಮ್‍ಗೆ ಹೋಗಿ ಆ್ಯಂಡಿ ವಿರುದ್ಧ ದೂರು ನೀಡಿದ್ದೇನೆ. ಅವರು ಕ್ರಮ ಕೈಗೊಂಡರೋ ಬಿಟ್ಟರೋ ನನಗೆ ಗೊತ್ತಿಲ್ಲ. ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ಬಳಿಕ ಮತ್ತೆ ಕನ್ಫೆಷನ್ ರೂಮ್‍ಗೆ ಹೋಗಿ ಮನೆಯಿಂದ ಹೊರಗೆ ಹೋದ ಮೇಲೆ ಆ್ಯಂಡಿ ವಿರುದ್ಧ ದೂರು ನೀಡುತ್ತೇವೆ ಎಂದು ತಿಳಿಸಿದ್ದೆ. ಅವರು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕವಿತಾ ಹೇಳಿದರು.

ಬಿಗ್‍ಬಾಸ್ ಮನೆಗೆ ಹೋದ ಕೆಲವೇ ದಿನಗಳಲ್ಲಿ ಆ್ಯಂಡಿ ಬಗ್ಗೆ ಗೊತ್ತಾಯಿತು. ಹೀಗಾಗಿ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇರುತ್ತಿದ್ದೆ. ಆದರೂ ಅವರೇ ಬಂದು ಮಾತನಾಡಿಸುತ್ತಿದ್ದರು. ಟಾಸ್ಕ್ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರು ಬರುತ್ತಿದ್ದ ಕಾರ್ಯಕ್ರಮಕ್ಕೆ ಗೈರು ಆಗುತ್ತಿದೆ ಎಂದರು.

ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಹೋಗಲೆಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೆ ನನಗೆ ಪರಿಚಿತರು ಬರುವಂತೆ ಒತ್ತಾಯ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಆ್ಯಂಡಿ ಮೈಕ್ ಅನ್ನು ಪಕ್ಕಕ್ಕೆ ಇಟ್ಟು ಬೈದರು ಎಂದು ಕವಿತಾ ದೂರಿದರು.

ಮುಂದಿನ ಸೀಸನ್‍ನಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸಬಾರದು ಎನ್ನುವ ಕಾಳಜಿ ಇದೆ. ಜೊತೆಗೆ ಆ್ಯಂಡಿ ಬಿಗ್‍ಬಾಸ್ ಮನೆಯಿಂದ ಹೊರಬಂದರೂ ಬದಲಾಗಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಮೈಕ್ ಅನ್ನು ಹಿಡಿದು, ಯಾರಿಗೂ ಕೇಳದಂತೆ ಆ್ಯಂಡಿ ಬೈಯುತ್ತಿದ್ದರು. ಇದು ಎಲ್ಲಾ ಸ್ಪರ್ಧಿಗಳ ಅನುಭವಕ್ಕೆ ಬಂದಿದೆ. ಆದರೆ ಇಲ್ಲಿ ನಾನು ನನಗೆ ಆಗಿರುವ ಸಮಸ್ಯೆ ಬಗ್ಗೆ ಮಾತ್ರ ದೂರು ನೀಡಲು ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *