Connect with us

ಅವಳು ಇನ್ನು ರಿಟರ್ನ್ ಬರಲ್ಲ – ಗಳಗಳನೇ ಕಣ್ಣೀರಿಟ್ಟ ಅರವಿಂದ್

ಅವಳು ಇನ್ನು ರಿಟರ್ನ್ ಬರಲ್ಲ – ಗಳಗಳನೇ ಕಣ್ಣೀರಿಟ್ಟ ಅರವಿಂದ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾ, ಪ್ರತಿ ದಿನ ಲವಲವಿಕೆಯಿಂದ ಇರುತ್ತಿದ್ದ ದಿವ್ಯಾ ಉರುಡುಗ ಈಗ ಮನೆಯನ್ನು ತೊರೆದಿದ್ದು ವಿಷಯ ಕೇಳಿ ಅರವಿಂದ್ ಗಳಗಳನೇ ಅತ್ತಿದ್ದಾರೆ.

67ನೇ ದಿನ ದಿವ್ಯಾ ಉರುಡುಗ ಬಟ್ಟೆಗಳನ್ನು ತಂದು ಸ್ಟೋರ್ ರೂಮಿಗೆ ಇರಿಸಿ ಈ ಕೂಡಲೇ ಎಂದು ಬಿಗ್ ಬಾಸ್ ಆದೇಶಿಸುತ್ತಾರೆ. ಕ್ಯಾಪ್ಟನ್ ಚಕ್ರವರ್ತಿ ಚಂದ್ರಚೂಡ್ ಆದೇಶವನ್ನು ಓದುತ್ತಿದ್ದಂತೆ ಗದ್ಗದಿತರಾದರು.

ಈ ಆದೇಶವನ್ನು ಕೇಳಿದ ಅರವಿಂದ್,”ಹೋದ್ರೆ ಅವಳು ಇನ್ನೂ ಬರಲ್ಲ ರಿಟರ್ನ್” ಎಂದು ಹೇಳಿ ಕಣ್ಣೀರು ಹಾಕಿದರು.”ದಿನ ಬೆಳಗ್ಗೆ ಎದ್ದು ರಾತ್ರಿ ತನಕ ನನ್ನ ಜೊತೆ ಅವಳು ಇರುತ್ತಿದ್ದಳು. ನಿಮ್ ಜೊತೆ ಗಲಾಟೆಯಾದ್ರೂ ಖುಷಿಯಾದ್ರೂ ನನ್ ಜೊತೇನೆ ಇರ್ತಿದ್ದಳು. ಎಲ್ಲ ಹೋಯ್ತು” ಎಂದು ಹೇಳಿ ಭಾವುಕರಾದರು.

ಪ್ರಶಾಂತ್ ಸಂಬರಗಿ ನಿನ್ನೆಯಿಂದ ಅರವಿಂದ್ ಡಲ್ ಆಗಿದ್ದಾನೆ ಎಂದರೆ ಮಂಜು ಅರವಿಂದನನ್ನು ನೋಡಲು ನನ್ನಿಂದ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದಿವ್ಯಾ ಉರುಡುಗ ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಎಲ್ಲ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಲಾಗಿದೆ. ಒಂದು ಬಾರಿ ಮನೆಯಿಂದ ಹೊರಗಡೆ ಹೋದರೆ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶ ಇಲ್ಲ. ಅಷ್ಟೇ ಅಲ್ಲದೇ ಈಗ ಕೋವಿಡ್ ಇರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಮತ್ತೆ ಕ್ವಾರಂಟೈನ್ ಆಗಬೇಕಾಗುತ್ತದೆ. ಕೊನೆಯ ಮೂರು ವಾರಗಳ ಕಾಲ ಇರುವ ಕಾರಣ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಮತ್ತೆ ದಿವ್ಯಾ ಬರುವುದಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಜೋಡಿ ಟಾಸ್ಕ್ ನಿಂದ ಅರವಿಂದ್ ಮತ್ತು ದಿವ್ಯಾ ಬಾಂಡ್ ಗಟ್ಟಿಯಾಗಿತ್ತು. ಇಬ್ಬರ ಚಿಂತನೆಗಗಳು ಮ್ಯಾಚ್ ಆಗಿದ್ದ ಕಾರಣ ಕೆಮಿಸ್ಟ್ರಿ ವರ್ಕ್ ಆಗಿ ವೀಕ್ಷಕರ ಗಮನ ಸೆಳೆದಿತ್ತು. ಮನೆಯ ಸದಸ್ಯರ ಜೊತೆ ಸುದೀಪ್ ಸಹ ಇಬ್ಬರನ್ನು ಕಾಲೆಳೆಯುತ್ತಿದ್ದರು. ನೀವಿಬ್ಬರು ಲವ್ ಮಾಡ್ತಿದ್ದೀರಾ ಎಂಬ ಮನೆಯವರ ಪ್ರಶ್ನೆಗೆ, ಇಬ್ಬರೂ ನಾವಿಬ್ಬರು ಉತ್ತಮ ಫ್ರೆಂಡ್ಸ್, ಇನ್ನೂ ಆ ಹಂತಕ್ಕೆ ಹೋಗಿಲ್ಲ ಎಂದು ಉತ್ತರ ನೀಡಿದ್ದರೂ ಜೋಡಿಗಳ ರೀತಿ ಮನೆಯಲ್ಲಿ ಇರುತ್ತಿದ್ದರು. ಅಷ್ಟೇ ಅಲ್ಲದೇ ದಿವ್ಯಾ ತನ್ನ ತಂದೆ ನೀಡಿದ್ದ ಡೈಮಂಡ್ ಉಂಗುರವನ್ನು ಅರವಿಂದ್‍ಗೆ ನೀಡಿ ಕೊನೆಯವರೆಗೂ ನನ್ನ ಜೊತೆ ಇರಬೇಕು ಎಂದು ತನ್ನ ಮನಸ್ಸಿನ ಮಾತನ್ನು ಹೇಳಿದ್ದರು.

ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಿವ್ಯಾ ಈಗ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರೂ ಮನೆಯಲ್ಲಿದ್ದಾಗ ಅರವಿಂದ್ ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ತನ್ನ ಪಾಲಿನ ಆಹಾರವನ್ನು ನೀಡಿದ್ದು ಅಲ್ಲದೇ ದಿವ್ಯಾ ಅವರ ಬಟ್ಟೆಯನ್ನು ಒಗೆದು ಕೊಡುವ ಮೂಲಕ ಪ್ರೀತಿ ತೋರಿಸಿದ್ದರು. ಹಳೆಯ ಸುಮಧರ ಕ್ಷಣಗಳನ್ನು ನೆನೆದು ಅರವಿಂದ್ ಈಗ ಕಣ್ಣೀರು ಹಾಕಿದ್ದು 67ನೇ ದಿನದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಪ್ರಸಾರವಾಗಲಿದೆ.

ದಿವ್ಯಾಗೆ ಆಗಿದ್ದು ಏನು?
66ನೇ ದಿನ ಲಿವಿಂಗ್ ಏರಿಯಾದಲ್ಲಿ ಸದಸ್ಯರು ಕುಳಿತ್ತಿದ್ದಾಗ, ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದರು. ಬಳಿಕ ಬಿಗ್ ಬಾಸ್ ವಾಯ್ಸ್ ಕೇಳಿಸಿದ್ದು, ಸ್ಕ್ಯಾನಿಂಗ್ ಬಳಿಕ ಯೂರಿನರಿ  ಇನ್‍ಫೆಕ್ಷನ್ ಕಂಡು ಬಂದಿರುವುದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಅರವಿಂದ್ ಭಾವುಕರಾಗಿಯೇ ಯಾ ಯಾ ಎಂದು ಹೇಳುತ್ತಾರೆ. ಅಲ್ಲದೆ ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.