Saturday, 16th February 2019

ಚೀಟಿ ಹರಿದ ಪ್ರಕರಣದಲ್ಲಿ ಜಾಮೀನು ಮಂಜೂರು- ಸಚಿವ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್

ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಈಗಲ್‍ ಟನ್ ರೆಸಾರ್ಟ್‍ನಲ್ಲಿ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

25 ಸಾವಿರ ರೂ. ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ತನಿಖಾಧಿಕಾರಿಗಳ ಮುಂದೆ ಸರಿಯಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರು ಶ್ಯೂರಿಟಿಗೆ ಕೋರ್ಟ್ ಸೂಚನೆ ನೀಡಿದೆ.

ಡಿಕೆಶಿ ಪರ ವಕೀಲರ ವಾದವೇನು?: ಡಿಕೆ ಶಿವಕುಮಾರ್ ಅವರಿಗೆ ಸಾಕ್ಷ್ಯ ನಾಶ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಈ ವಿಚಾರವಾಗಿ ಐಡಿಯಾಲಜಿ ಅಧಿಕಾರಿಗಳ ಮುಂದೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಆ ವಿಚಾರದಲ್ಲಿ ಹೇಳಿಕೆ ನೀಡಲು ಕಾಲಾವಕಾಶ ಕೇಳಿದ್ದಾರೆ. ದಾಳಿ ವೇಳೆ ಸಿಕ್ಕಿರೋ ಯಾವ ದಾಖಲೆಗಳಲ್ಲಿಯೂ ಡಿಕೆಶಿ ಹೆಸರಿಲ್ಲ. ದೂರಿಗೂ ಮತ್ತು ತನಿಖೆ ನಡೆಸುತ್ತಿರುವ ವಿಧಾನಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಈಗಲ್‍ ಟನ್ ರೆಸಾರ್ಟ್ ನಲ್ಲಿ ಸಿಕ್ಕಿದ್ದ ಚೀಟಿ ಇಟ್ಟುಕೊಂಡು ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ಆ ಚೀಟಿ ಕೇವಲ 20 ರೂಪಾಯಿ ಮೌಲ್ಯದ್ದು. ಡಿಕೆಶಿಗೆ ಸಂಬಂಧ ಇಲ್ಲದ ವ್ಯಕ್ತಿಗಳನ್ನು ತಳುಕು ಹಾಕಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ಡಿಕೆಶಿ ವಿರುದ್ಧ ದಾಖಲಾಗಿರುವ ಎಲ್ಲಾ ಐಟಿ ಸೆಕ್ಷನ್‍ಗಳೂ ಜಾಮೀನು ಕೇಸುಗಳೇ ಎಂಬುದು ಡಿಕೆಶಿ ಪರ ವಕೀಲರ ವಾದವಾಗಿತ್ತು.

ಐಟಿ ಪರ ವಕೀಲರ ವಾದವೇನು?: ಡಿಕೆಶಿ ವಿರುದ್ಧ ಹಲವು ತನಿಖೆಗಳು ಅಗಬೇಕು. ಈಗಾಗಲೇ ಸಾಕ್ಷಿ ನಾಶಪಡಿಸುವ ಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಡಿಕೆಶಿಗೆ ಬೇಲ್ ನೀಡಬೇಡಿ. ಇದೇನೂ ರಾಜಕೀಯ ಪ್ರೇರಿತ ದಾಳಿ ಅಲ್ಲ. ಉದ್ದೇಶ ಇಟ್ಕೊಂಡು ದಾಳಿಯನ್ನು ನಡೆಸಿಲ್ಲ. ಎಲ್ಲದಕ್ಕೂ ಸರಿಯಾದ ಸಾಕ್ಷ್ಯಗಳಿವೆ. ಪ್ರಶ್ನೆ ಕೇಳಿದರೆ ಹಾರಿಕೆ ಉತ್ತರ ಬರುತ್ತೆ. ಭಯದಿಂದ ಚೀಟಿ ಹರಿದಿದ್ದೇನೆ ಎಂದಿದ್ದಾರೆ. ಅಕ್ರಮ ಮಾಡಿಲ್ಲ ಅಂದ್ರೆ ಭಯ ಪಡುವ ಅವಶ್ಯಕತೆ ಇರಲಿಲ್ಲ. ಐಟಿ ಅಧಿಕಾರಿಗಳ ಮುಂದೆ ಡಿಕೆ ತಪ್ಪೊಪ್ಪಿಗೆಯೂ ಆಗಿದೆ. ಡಿಕೆಶಿ ವಿರುದ್ದ ಇನ್ನಷ್ಟು ತನಿಖೆ ಆಗಬೇಕಿದೆ ಎಂದು ಐಟಿ ಪರ ವಕೀಲರು ವಾದ ಮಾಡಿದ್ದರು.

ಆರೋಪಿಯ ಕಸ್ಟೋಡಿಯಲ್ ಇಂಟ್ರಾಗೇಷನ್ ಅಗತ್ಯ ಇದೆ.ಯಾವುದೇ ಕಾರಣಕ್ಕೂ ಜಾಮೀನು ನೀಡಬೇಡಿ. ಆರೋಪಿ ಪ್ರಬಲ ಆಗಿರೋದ್ರಿಂದ ಜಾಮೀನು ನೀಡಿದ್ರೆ ಪ್ರಕರಣ ಹಾಳಾಗುತ್ತೆ. ಡಿಕೆಶಿಗೆ ಐಟಿ ಅಧಿಕಾರಿಗಳ ದಾಳಿ ಬಗ್ಗೆ ಮುನ್ಸೂಚನೆ ಇತ್ತು. ಐಟಿ ಅಧಿಕಾರಿ ಎದುರೇ ಚೀಟಿ ಹರಿದು ಹಾಕಿದ್ರು. ದಾಖಲೆ ಹರಿದು ಹಾಕಿದ್ದು ಸಾಕ್ಷ್ಯ ನಾಶ ಅಲ್ಲದೆ ಮತ್ತೇನು? ನೀವು ಸಾಕ್ಷಿ ಏಕೆ ನಾಶ ಮಾಡಿದ್ರಿ ಎಂಬ ಪ್ರಶ್ನೆಗೆ ಆಗತಾನೆ ನಿದ್ದೆಯಿಂದ ಎದ್ದಿದ್ದೆ, ಗಾಬರಿಯಲ್ಲಿ ಹರಿದೆ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ. ಪದೇ ಪದೇ ಕೇಳಿದ್ರೂ ಯಾವುದೇ ಉತ್ತರ ಕೊಡಲಿಲ್ಲ ಎಂದು ವಾದಿಸಿದ್ದರು.

ಕೆಲವೊಂದು ಸೆಕ್ಷನ್ ಗಳು ಜಾಮೀನಿನ ಕೇಸಾಗಿದ್ದರೂ ತನಿಖೆಯ ಅಗತ್ಯವಿದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ಸಿಕ್ಕಂತಹ ಚೀಟಿ ಕೇವಲ 20 ರುಪಾಯಿ ಬೆಲೆ ಬಾಳುವ ದಾಖಲೆಯಲ್ಲ. ಅದು 10 ಕೋಟಿಗು ಹೆಚ್ಚು ಬೆಲೆ ಬಾಳೋ ಚೀಟಿಯಾಗಿದೆ. ಅದರಲ್ಲಿ ಹಲವು ಕಂಪನಿಗಳ ಜೊತೆ ಕೋಟ್ಯಂತರ ರುಪಾಯಿ ವ್ಯವಹಾರದ ಕುರುಹುಗಳಿವೆ. ಹಾಗಾಗಿ ಜಾಮೀನು ನೀಡಬೇಡಿ ಎಂದು ಐಟಿ ಪರ ವಕೀಲರು ಮನವಿ ಮಾಡಿದ್ದರು.

ಆದ್ರೆ ಇದೀಗ ಕೋರ್ಟ್ ಸಚಿವ ಡಿಕೆ ಶಿವಕುಮಾರ್ ಗೆ ಜಾಮೀನು ಮಂಜೂರು ಮಾಡಿದ್ದು, ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನೊಂದು ಕಡೆ ಐಟಿ ಇಲಾಖೆ ಡಿಕೆಶಿಗೆ ಇನ್ನೊಮ್ಮೆ ಡ್ರಿಲ್ ಮಾಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಐಟಿ ಇಲಾಖೆಗೆ ನೀಡಿದ್ದ ಹೇಳಿಕೆಗಳು ಗೊಂದಲಕಾರಿಯಾಗಿರೋದ್ರಿಂದ ಡಿಕೆಶಿ ಅವರನ್ನು ಇನ್ನಷ್ಟು ಪ್ರಶ್ನೆ ಮಾಡಲು ಸಕಲ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *