Connect with us

ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ

ಭಾರೀ ಗಾತ್ರದ ನಾಗರಹಾವಿನ ರಕ್ಷಣೆ- ಐತಾಳರ ಕಾರ್ಯಾಚರಣೆ ಬಹಳ ರೋಚಕ

ಉಡುಪಿ: ನಾಗರಹಾವನ್ನು ಕಂಡ್ರೆ, ಅದು ಹೆಡೆ ಬಿಚ್ಚಿ ಬುಸುಗುಡೋದನ್ನು ನೋಡಿದ್ರೆ ಎಂತಾ ಗಟ್ಟಿ ಹಾರ್ಟೂ ಒಂದು ಸಲಕ್ಕೆ ಜೋರು ಹೊಡ್ಕೊಳ್ಳುತ್ತೆ. ಉಡುಪಿಯ ಹೊರವಲಯದಲ್ಲಿ ಸಿಕ್ಕ ಹಾವನ್ನೇನಾದ್ರು ಕಂಡ್ರೆ ನೀವು ಭಯಪಟ್ಟು ಬೆಚ್ಚಿ ಬೀಳೋದಂತು ಗ್ಯಾರೆಂಟಿ.

ಭಾರೀ ಗಾತ್ರದ ನಾಗರಹಾವೊಂದು ಬಾವಿಯಲ್ಲಿ ಬಿದ್ದು ಮೇಲೆ ಬರಲು ಅಗದೆ ಒದ್ದಾಡಿದ ಘಟನೆ ಉಡುಪಿಯ ಕುಕ್ಕೆಹಳ್ಳಿಯಲ್ಲಿ ಆಗಿದೆ. ಕೊರ್ಗು ನಾಯ್ಕ್ ಅವರ ಬಾವಿಗೆ ಬೃಹತ್ ಗಾತ್ರದ ಬಿಳಿನಾಗರ ಹಾವು ಬಿದ್ದಿತ್ತು. ಆರಂಭದಲ್ಲಿ ಸ್ಥಳೀಯರಿಗೆ ನಾಗರಹಾವು ಹೆಬ್ಬಾವಿನಂತೆ ಕಂಡಿದೆ. ಆ ಹಾವಿನ ಗಾತ್ರ ಅಷ್ಟು ದೊಡ್ಡದಾಗಿತ್ತು. ಭಯ ಹುಟ್ಟಿಸುವಂತಿತ್ತು.

ಬಾವಿ ಮೇಲಿಂದ ನೋಡಿದ್ರೆ, ಆ ಹಾವು ಮೇಲೆ ಬರಲು ಹೆಣಗಾಡುತ್ತಿರುವುದು ಮನೆ ಮಂದಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಬಾವಿಯ ಸುತ್ತಲ ಪಟ್ಟಿಯಿಂದ ಹೆಡೆಯೆತ್ತುತ್ತಿದ್ದದ್ದನ್ನು ಕಂಡ ನಂತರ ನಾಗರಹಾವು ಎಂಬೂದು ಸಾಬೀತಾಗಿದೆ. ಹಾವನ್ನು ರಕ್ಷಿಸಲೇಬೇಕೆಂದು ಪಣ ತೊಟ್ಟ ಮನೆಯವರು ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮಾಹಿತಿ ನೀಡಿದ್ದಾರೆ. ಧಾರಾಕಾರ ಮಳೆ ಕೂಡಾ ಬರುತ್ತಿದ್ದುದರಿಂದ ಬಾವಿಗಿಳಿದು ಕಾರ್ಯಾಚರಣೆ ನಡೆಸೋದು ಸಾಧ್ಯವಿರಲಿಲ್ಲ.

ಹಾವು ಹೆಡೆ ಬಿಚ್ಚಿ ಬುಸುಗುಟ್ಟುವುದನ್ನು ಕಂಡರೆ ಎಂಥವರಿಗೂ ಭಯವಾಗಬೇಕು. ಆ ಪರಿಸ್ಥಿತಿಯಲ್ಲಿ ತಜ್ಞರೂ ಕ್ಷಣಕಾಲ ಯೋಚಿಸುವಂತಿತ್ತು. ಸುರಿವ ಮಳೆಯನ್ನೂ ಲೆಕ್ಕಿಸದೆ ಬುಸುಗುಟ್ಟುತ್ತಿದ್ದ ಹಾವನ್ನು ರಕ್ಷಣೆ ಮಾಡಲು ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳ್ ಅವರನ್ನು ಕರೆಸಲಾಯ್ತು. ಬಾವಿಗೆ ಇಳಿಯೋದು ಅಪಾಯವೆಂದರಿತ ಅವರು, ಬಾವಿಗೆ ಟಯರನ್ನು ಇಳಿಸುವ ಪ್ಲ್ಯಾನ್ ಮಾಡಿದರು. ಎರಡು ಹಗ್ಗದ ಸಹಾಯದಿಂದ ಬಾವಿಗೆ ಟಯರ್ ಇಳಿಸಲಾಯ್ತು. ಟಯರ್ ಮೂಲಕ ಹಾವನ್ನು ಮೇಲಕ್ಕೆತ್ತಿ, ನಂತರ ನಾಜೂಕಾಗಿ ಪೈಪ್ ಒಳಗೆ ಹಾವನ್ನು ಸೇರಿಸಲಾಯ್ತು.

ಸುರಕ್ಷಿತವಾಗಿ ಬೃಹತ್ ಗಾತ್ರದ ಹಾವನ್ನು ರಕ್ಷಿಸಲಾಯ್ತು. ಮೇಲಕ್ಕೆ ಬರುವ ತನಕವೂ ಬುಸುಗುಟ್ಟುತ್ತಲೇ ಇದ್ದ ಹಾವು, ನಂತರ ಪೈಪಿನೊಳಗಿಂದಲೇ ಕಾಡು ಸೇರಿದೆ. ಮನೆಯವರು ನಿಟ್ಟುಸಿರು ಬಿಟ್ಟರು. ಕಪ್ಪೆ ಹಿಡಿಯಲು ಬಾವಿಗಿಳಿದಿದ್ದ ನಾಗರಹಾವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರೂ ಸುಧೀಂದ್ರ ಐತಾಳರಿಗೆ ಸಹಕಾರ ನೀಡಿದರು.