Connect with us

International

ಮುನ್ನಡೆಯಲ್ಲಿ ಬೈಡನ್‌ – ಟ್ರಂಪ್‌ ಸೋತರೆ ಏನು ಮಾಡಬಹುದು?

Published

on

ವಾಷಿಂಗ್ಟನ್‌: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚಿನಲ್ಲಿದ್ದರೂ, ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಫಲಿತಾಂಶ ಹೊರಬೀಳಬೇಕಿರುವ ಐದು ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್-ಬೈಡನ್ ನಡುವೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಟಫ್ ಫೈಟ್ ನಡೆಯುತ್ತಿದೆ.

ನಿನ್ನೆಯವರೆಗೂ ನೆವಾಡದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದ್ದ ಜೋ ಬೈಡನ್ ಇಂದು ಜಾರ್ಜಿಯಾದಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಆದರೆ ಮತ ಎಣಿಕೆ ಮುಂದುವರಿದಂತೆ ಜೋ ಬೈಡನ್ ನಿಕಟ ಸ್ಪರ್ಧೆ ನೀಡ್ತಿದ್ದಾರೆ. ಇಲ್ಲಿಯೂ ಯಾವುದೇ ಕ್ಷಣದಲ್ಲಿ ಜೋ ಬೈಡನ್ ಮುನ್ನಡೆ ಸಾಧಿಸುವ ಸಂಭವ ಕಂಡು ಬರುತ್ತಿದೆ.

 

ಅಲಸ್ಕಾ ಮತ್ತು ನಾರ್ತ್ ಕೊರೋಲಿನಾದಲ್ಲಿ ಮಾತ್ರ ಟ್ರಂಪ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಐದರಲ್ಲಿ ಅಲಸ್ಕಾ ಬಿಟ್ಟು, ಯಾವುದೇ ರಾಜ್ಯವನ್ನು ಗೆದ್ದರೂ ಬೈಡನ್ ಅಧ್ಯಕ್ಷೀಯ ಚುನಾವಣೆ ಗೆದ್ದಂತೆ ಆಗುತ್ತದೆ.

ಅಮೆರಿಕದಲ್ಲಿ ಕಳೆದ 120 ವರ್ಷಗಳಲ್ಲೇ ಕಂಡು ಕೇಳರಿಯದ ರೀತಿ ಅಂದ್ರೆ ಶೇ.66ರಷ್ಟು ಮತದಾನ ನಡೆದಿದೆ. ಈ ಹಿಂದಿನ ಎಲ್ಲಾ ಅಧ್ಯಕ್ಷೀಯ ಅಭ್ಯರ್ಥಿಗಳನ್ನು ಮೀರಿಸಿ ಬೈಡನ್ 7.10 ಕೋಟಿ ಮತ ಪಡೆದು ದಾಖಲೆ ಬರೆದಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

ಫಲಿತಾಂಶದ ಬಗ್ಗೆ ಟ್ರಂಪ್ ತೀವ್ರ ಅಸಮಾಧಾನ ಹೊಂದಿದ್ದಾರೆ. ಮತ ಎಣಿಕೆ ವೇಳೆ ಅಕ್ರಮ ನಡೆಯುತ್ತಿದೆ. ಕೌಂಟಿಂಗ್ ಕೇಂದ್ರಗಳಿಗೆ ನಮ್ಮ ಪಕ್ಷದವರನ್ನು ಬಿಟ್ಟುಕೊಳ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಈ ಮಧ್ಯೆ ಅಮೆರಿಕಾದ ಬಹುತೇಕ ರಾಜ್ಯಗಳಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೈಡನ್‍ಗೆ ಭದ್ರತೆ ಹೆಚ್ಚಿಸಲಾಗಿದೆ. 538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು ಜೋ ಬೈಡನ್ 264 ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ.

ಟ್ರಂಪ್‌ ಏನು ಮಾಡಬಹುದು?
ಒಂದು ವೇಳೆ ಜೋ ಬೈಡನ್ ಗೆದ್ದರೂ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದರು. ಚುನಾವಣೆಗೆ ಮೊದಲೇ ಪೋಸ್ಟಲ್‌ ವೋಟಿಂಗ್‌ನಲ್ಲಿ ಭಾರೀ ಅಕ್ರಮ ನಡೆಯಲಿದೆ ಎಂದಿದ್ದರು. ಈಗಲೂ ಈ ಮಾತನ್ನೇ ಹೇಳುತ್ತಿದ್ದಾರೆ. ಹೀಗಾಗಿ ಟ್ರಂಪ್ ಸೋತರೂ ಜನವರಿ 20ರವರೆಗೂ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.

ಈಗಾಗಲೇ ಟ್ರಂಪ್‌ ಚುನಾವಣಾ ಮತ ಎಣಿಕೆಯ ಅಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಬರೋಬ್ಬರಿ 76 ದಿನ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದು ಅಧಿಕಾರ ಚಲಾಯಿಸಬಹುದು. ಟ್ರಂಪ್ ಕೈಯಲ್ಲಿ ಅಧಿಕಾರ ಇರುವ ಕಾರಣ ಅವರು ಏನು ಬೇಕಾದರೂ ಮಾಡಬಹುದು. ವಿವಾದಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಉನ್ನತಾಧಿಕಾರಿಗಳ ವರ್ಗಾವಣೆಗಳನ್ನು ಮಾಡಬಹುದು .

76 ದಿನಗಳ ಬಳಿಕವೂ ಟ್ರಂಪ್ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದೇನು ಎಂಬ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿಲ್ಲ. ನೂತನ ಅಧ್ಯಕ್ಷರು, ಸೀಕ್ರೆಟ್ ಏಜೇನ್ಸಿ ನೆರವಿನಿಂದ ಟ್ರಂಪ್‍ರನ್ನು ಶ್ವೇತಸೌಧದಿಂದ ಹೊರಗೆ ಕಳಿಸಬಹುದು. ಟ್ರಂಪ್ ಮಾಜಿ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ಕೂಡ ಇದಕ್ಕೆ ಅಡ್ಡ ಬರಬಹುದು.

Click to comment

Leave a Reply

Your email address will not be published. Required fields are marked *

www.publictv.in