Friday, 20th September 2019

ಚೆನ್ನೈಯಲ್ಲಿರುವ ಹುಚ್ಚ ವೆಂಕಟ್‍ನನ್ನ ಬೆಂಗ್ಳೂರಿಗೆ ಕರೆತರುವ ಪ್ರಯತ್ನ

ಚೆನ್ನೈ: ಫೈರಿಂಗ್ ಸ್ಟಾರ್ ಮತ್ತು ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ನಟ ಹುಚ್ಚ ವೆಂಕಟ್ ಚೆನ್ನೈನ ಬೀದಿಯಲ್ಲಿ ತಿರುಗಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಫೇಸ್‍ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದ ನಟ ಭುವನ್ ಪೊನ್ನಣ್ಣ ಬೆಂಗಳೂರಿಗೆ ಕರೆ ತರಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಭುವನ್ ಸ್ನೇಹಿತರೊಬ್ಬರು ಹುಚ್ಚ ವೆಂಕಟ್ ನನ್ನು ಬೆಂಗಳೂರಿಗೆ ಕರೆತರಲು ಪ್ರಯತ್ನಿಸಿದ್ದಾರೆ.

ಚೆನ್ನೈನ ಬೀದಿಯಲ್ಲಿ ಚಪ್ಪಲಿ ಧರಿಸದೇ, ಕೊಳಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಹುಚ್ಚ ವೆಂಕಟ್ ನನ್ನ ಭುವನ್ ಸ್ನೇಹಿತ ಪತ್ತೆ ಹೆಚ್ಚಿದ್ದಾರೆ. ಹುಚ್ಚ ವೆಂಕಟ್ ನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೋಗುವ ಬಗ್ಗೆ ಮಾತಾನಾಡಿದ್ದಾರೆ. ಸಹಾಯ ಮಾಡಲು ಹೋದ ಭುವನ್ ಸ್ನೇಹಿತನಿಗೆ ಹುಚ್ಚ ವೆಂಕಟ್ ಕೌಂಟರ್ ನೀಡಿದ್ದಾರೆ. ವೆಂಕಟ್ ಜೊತೆ ಮಾತನಾಡಿರುವ ಸಂಭಾಷಣೆಯನ್ನು ಭುವನ್ ಗೆಳೆಯ ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಭುವನ್ ಸ್ನೇಹಿತ: ನಿಮ್ಮ ಬಟ್ಟೆ ಎಲ್ಲಾ ಇದೆ?
ಹುಚ್ಚ ವೆಂಕಟ್: ಎಲ್ಲ ಬಟ್ಟೆ ಬ್ಯಾಗ್ ನಲ್ಲಿದೆ.
ಭುವನ್ ಸ್ನೇಹಿತ: ರಾತ್ರಿ ಸ್ನಾನ ಮಾಡಬೇಕಿತ್ತು?
ಹುಚ್ಚ ವೆಂಕಟ್: ಇಲ್ಲ ತುಂಬಾನೇ ಸುಸ್ತಾಗಿತ್ತು.
ಭುವನ್ ಸ್ನೇಹಿತ: ಕಾಲಿಗೆ ಏನಾಗಿದೆ ಅಣ್ಣಾ?
ಹುಚ್ಚ ವೆಂಕಟ್: ಏನಿಲ್ಲ.. (ಗಾಯ ತೋರಿಸುವ ವೆಂಕಟ್). ಕೈಯಲ್ಲಿ ಹಣ ಇಲ್ಲ.
ಭುವನ್ ಸ್ನೇಹಿತ: ಕಾರ್ ಗೆ ಪೆಟ್ರೋಲ್ ಹಾಕಿಸುತ್ತೇನೆ. ಇಲ್ಲಿಂದ ಬೆಂಗಳೂರಿಗೆ ಹೋಗಬೇಕು.
ಹುಚ್ಚ ವೆಂಕಟ್: ಹಾಗಾದ್ರೆ ಟ್ಯಾಂಕ್ ಫುಲ್ ಮಾಡಿಸು.

ಭುವನ್ ಸ್ನೇಹಿತ: ಟ್ಯಾಂಕ್ ಫುಲ್ ಮಾಡಿಸಲು ಎಷ್ಟು ಹಣ ಬೇಕು?
ಹುಚ್ಚ ವೆಂಕಟ್: ಎರಡು ಸಾವಿರ ರೂಪಾಯಿ.
ಭುವನ್ ಸ್ನೇಹಿತ: ಪೆಟ್ರೋಲ್ ಇಲ್ವಾ..? ಸರಿ ನಾನು ಟ್ಯಾಂಕ್ ಫುಲ್ ಮಾಡಸ್ತೀನಿ, ಆದ್ರೆ ನೀವು ಬೆಂಗಳೂರಿಗೆ ಹೋಗಬೇಕು.
ಹುಚ್ಚ ವೆಂಕಟ್: ಬೆಂಗಳೂರಿಗೆ ಹೋಗಲು ಎರಡು ದಿನ ಬೇಕು.
ಭುವನ್ ಸ್ನೇಹಿತ: ನಿನ್ನೆ ಬೆಂಗಳೂರಿಗೆ ಹೋಗ್ತೀನಿ ಅಂದಿದ್ರಿ ಹೋಗಿಲ್ಲ.
ಹುಚ್ಚ ವೆಂಕಟ್: ಲೇ… ಯಾವಾಗ ಎಲ್ಲಿ ಇರಬೇಕು ಅಂತ ನನಗೆ ಗೊತ್ತು.
ಭುವನ್ ಸ್ನೇಹಿತ: ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ಹೋಗುವುದು ಉತ್ತಮ.
ಹುಚ್ಚ ವೆಂಕಟ್: ಯಾಕೆ ನಾನು ಚೆನ್ನೈನಲ್ಲಿ ಇರೋದು ನಿನಗೆ ಇಷ್ಟ ಇಲ್ವಾ?

ನಟ ಭುವನ್ ಅಭಿನಯದ ‘ರಾಂಧವ’ ಚಿತ್ರತಂಡ ಚೆನ್ನೈಗೆ ತೆರಳಿತ್ತು. ಈ ವೇಳೆ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಚೆನ್ನೈ ಬೀದಿಯಲ್ಲಿ ಅದೂ ಬರಿಗಾಲಲ್ಲಿ ಚಪ್ಪಲಿ ಇಲ್ಲದೇ ಕೊಳಕು ಬಟ್ಟೆ ಹಾಕಿಕೊಂಡು ವೆಂಕಟ್ ನಡೆದುಕೊಂಡು ಹೋಗುವುದನ್ನು ನೋಡಿದ್ದರು. ತಕ್ಷಣ ಅವರನ್ನು ಮಾತನಾಡಿಸಲು ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು ಹೋಗಿದ್ದಾರೆ. ಆದರೆ ಹುಚ್ಚ ವೆಂಕಟ್ ಯಾವುದೇ ರೀತಿ ಸಹಕರಿಸದೆ ಮುಂದೆ ಹೋಗಿದ್ದರು.

ತಕ್ಷಣ ಆ ವಿಡಿಯೋವನ್ನ ನಟ ಭುವನ್ ಅವರಿಗೆ ಕಳುಹಿಸಿದ್ದಾರೆ. ಅವರು ತಮ್ಮ ಫೇಸ್ ಬುಕ್‍ನಲ್ಲಿ ವಿಡಿಯೋ ಹಂಚಿಕೊಂಡು, “ಗೆಳೆಯರೆ, ಹುಚ್ಚ ವೆಂಕಟ್ ಯೂಟ್ಯೂಬ್ ಸ್ಟಾರ್ ಅವರು ವಿಡಿಯೋ ನೋಡಿ ನನಗೆ ಕರಳು ಚಿವುಟಿದ ಹಾಗೆ ಆಯಿತು, ಹಾಕೋದಕ್ಕೆ ಕಾಲಿಗೆ ಚಪ್ಪಲಿಯೂ ಇಲ್ದೆ ಚೆನ್ನೈನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ರಾಂಧವ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಕುಟುಂಬ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು. ಸಹಾಯ ಮಾಡೋಣ. ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಪಾಪ” ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದರು.

ಇದೀಗ್ ಭುವನ್ ಮನವಿಯಂತೆ ಸ್ನೇಹಿತ ಹುಚ್ಚ ವೆಂಕಟ್ ರನ್ನು ಭೇಟಿಯಾಗಿದ್ದು, ಕರೆತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದ್ರೆ ಹುಚ್ಚ ವೆಂಕಟ್ ಚೆನ್ನೈನಿಂದ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್ ಸಹ ಸ್ಪರ್ಧಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಬಂದಿದ್ದರು. ತದನಂತರ ಮತ್ತೊಂದು ಸೀಸನ್ ನಲ್ಲಿ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾಗ ಪ್ರಥಮ್ ಮೇಲೆ ಹಲ್ಲೆ ನಡೆಸಿದ್ದರು. ಒಮ್ಮೆ ವಿಷ ಕುಡಿದಿದ್ದೇನೆ ಎಂದು ದೊಡ್ಡ ಡ್ರಾಮಾ ಮಾಡಿದ್ದರು.

Leave a Reply

Your email address will not be published. Required fields are marked *