Connect with us

Cinema

ಭಾರತಿ ಸಿಂಗ್ ಡ್ರಗ್ಸ್ ಪ್ರಕರಣ- ಇಬ್ಬರು ಎನ್‍ಸಿಬಿ ಅಧಿಕಾರಿಗಳ ಅಮಾನತು

Published

on

– ಜಾಮೀನಿಗೆ ಸಹಕರಿಸಿರುವ ಆರೋಪ
– ಬೇರೆ ಅಧಿಕಾರಿಗಳ ನೇಮಕ

ನವದೆಹಲಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಸಿಗಲು ಸಹಕರಿಸಿದ್ದಾರೆ ಎಂಬ ಆರೋಪಿದ ಮೇಲೆ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಮುಂಬೈ ವಲಯ ಘಟಕದ ಇಬ್ಬರು ಎನ್‍ಸಿಬಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಅವರ ಜಾಗಕ್ಕೆ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಜಾಮೀನು ಪಡೆಯಲು ಸಹಕಾರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಇವರ ಪತಿ ಹರ್ಷ್ ಲಿಂಬಾಚಿಯಾ ಹಾಗೂ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಈ ಇಬ್ಬರು ತನಿಖಾಧಿಕಾರಿ(ಐಒ)ಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇಬ್ಬರು ಅಧಿಕಾರಿಗಳು ಮಾತ್ರವಲ್ಲದೆ ಎನ್‍ಸಿಬಿಯ ಪ್ರಾಸಿಕ್ಯೂಟರ್ ಪಾತ್ರದ ಕುರಿತು ಸಹ ತನಿಖೆ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಎರಡೂ ಪ್ರಕರಣಗಳಲ್ಲಿ ನಿಗದಿತ ಜಾಮೀನು ವಿಚಾರಣೆ ವೇಳೆ ತನಿಖಾಧಿಕಾರಿಗಳು ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆ ಹಾಜರಾಗಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ಬಂಧನಕ್ಕೊಳಗಾಗಿದ್ದ ಡ್ರಗ್ ಪೆಡ್ಲರ್ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಅಕ್ಟೋಬರ್ 27ರಂದು ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಪ್ರಕಾಶ್ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅಕ್ಕಪಕ್ಕದವರ ಸಮ್ಮುಖದಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 2.7 ಗ್ರಾಂ. ಹಶಿಶ್ ವಶಪಡಿಸಿಕೊಳ್ಳಲಾಗಿತ್ತು.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ನ್ಯಾಯಾಲಯ ನವೆಂಬರ್ 23ರಂದು ಷರತ್ತು ಬದ್ಧ ಜಾಮೀನು ನೀಡಿದೆ. ನ.21ರಂದು ಭಾರತಿ ಸಿಂಗ್ ನಿವಾಸ ಮತ್ತು ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದರು. ಭಾನುವಾರ ಇಬ್ಬರನ್ನ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಇದೇ ವೇಳೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ದಂಪತಿಗೆ ಡಿಸೆಂಬರ್ 4ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಭಾರತಿ ಕಲ್ಯಾಣದ ಜೈಲಿಗೂ ಮತ್ತು ಹರ್ಷ್ ಟಲೇಜಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದಾದ ಬಳಿಕ ದಂಪತಿ ಜಾಮೀನು ಕೋರಿ ಕಿಲಾ ನ್ಯಾಯಾಲಯದ ಮೊರೆ ಹೋಗಿದ್ದರು.

ನ.21ರಂದು ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು.

Click to comment

Leave a Reply

Your email address will not be published. Required fields are marked *

www.publictv.in