Latest
ಯೋಗಿ ಆದಿತ್ಯನಾಥ್ ಅತ್ಯುತ್ತಮ ಸಿಎಂ- ನಾಲ್ಕನೇ ಬಾರಿ ಮೊದಲ ಸ್ಥಾನ

– ಎರಡು, ಮೂರನೇ ಸ್ಥಾನದಲ್ಲಿ ಕೇಜ್ರಿವಾಲ್, ಮಮತಾ ಬ್ಯಾನರ್ಜಿ
ನವದೆಹಲಿ: ದೇಶದಲ್ಲೇ ಅತ್ಯುತ್ತಮ ಕೆಲಸ ಮಾಡುವ ಮುಖ್ಯಮಂತ್ರಿಗಳ ಪೈಕಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸತತ ನಾಲ್ಕನೇ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ನಾಲ್ಕು ವರ್ಷಗಳು ಕಳೆದಿದ್ದು, ಸತತ ನಾಲ್ಕು ಬಾರಿ ಅತ್ಯತ್ತಮ ಮುಖ್ಯಮಂತ್ರಿ ಪಟ್ಟವನ್ನು ಪಡೆದಿದ್ದಾರೆ. ಇಂಡಿಯಾ ಟುಡೇ ಸಮೂಹ- ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್(ಎಂಒಟಿಎನ್) ಜನವರಿಯಲ್ಲಿ ನಡೆಸಿದ ಸಮೀಕ್ಷೆ ಬಳಿಕ ಈ ಮಾಹಿತಿ ಬಹಿರಂಗವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೇಶದ ಶೇ.25 ಮತಗಳನ್ನು ಪಡೆಯುವ ಮೂಲಕ ದೇಶದಲ್ಲೇ ಬೆಸ್ಟ್ ಪರ್ಫಾರ್ಮಿಂಗ್ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಭಾರತದ ಎಂಗೆಸ್ಟ್ ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್ ಸಹ ಒಬ್ಬರು. ಇತ್ತೀಚೆಗೆ ಹತ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಲವ್ ಜಿಹಾದ್ ಕಾನೂನು ಜಾರಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ತೀವ್ರ ಟೀಕೆ ನಡೆಸಿದ್ದವು. ಇದಾವುದೂ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ತಗ್ಗಿಲ್ಲ. ಕಳೆದ ಬಾರಿ ಆಗಸ್ಟ್ನಲ್ಲಿ ನಡೆದ ಸಮೀಕ್ಷೆಗೆ ಹೋಲಿಸಿದರೆ ಈ ಬಾರಿ ಅವರಿಗೆ ಒಂದು ಪರ್ಸೆಂಟ್ ಹೆಚ್ಚು ಅಂಕ ಬಂದಿದೆ.
ಸಮೀಕ್ಷೆಯ ಪ್ರಕಾರ ಶೇ.54ರಷ್ಟು ಜನರು ಯೋಗಿ ಆದಿತ್ಯನಾಥ್ ಅವರ ಮತಾಂತರ ವಿರೋಧಿ ಕಾನೂನು ಬೆಂಬಲಿಸಿದ್ದಾರೆ. ಶೇ.58ರಷ್ಟು ಜನ ಕಾನೂನಿನ ವಿರುದ್ಧ ಮತ ಚಲಾಯಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಮಾರ್ಚ್ 2017ರಲ್ಲಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಗೋ ಹತ್ಯೆ ನಿಷೇಧ, ಗಲಭೆ ಸಮಯದಲ್ಲಿ ಸಾರ್ವಜನಿಕ, ಖಾಸಗಿ ಆಸ್ತಿಗೆ ಹಾನಿ ಮಾಡಿದ್ದರೆ ಅವರಿಂದಲೇ ಹಣ ವಸೂಲಿ ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದಾರೆ.
2ನೇ ಸ್ಥಾನದಲ್ಲಿ ಕೇಜ್ರಿವಾಲ್
ಒಟ್ಟು ಶೇ.14ರಷ್ಟು ಮತಗಳನ್ನು ಪಡೆಯುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2ನೇ ಸ್ಥಾನ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರನ್ನು ಹಿಂದಿಕ್ಕಿ ಮೂರನೇ ಸ್ಥಾನ ಪಡೆದಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶೇ.6ರಷ್ಟು ಮತಗಳನ್ನು ಪಡೆಯುವ ಮೂಲಕ 4ನೇ ಸ್ಥಾನ ಪಡೆದಿದ್ದಾರೆ.
