Bengaluru City
2 ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಜನರು ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ: ಸಿಎಂ

– ವಿಜಯೇಂದ್ರ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ
ಬೆಂಗಳೂರು: ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಜನರು ರಾಜ್ಯ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಮತದಾನ ಮಾಡಿದ ಮತದಾರರಿಗೆ ಪಕ್ಷದ ಪರವಾಗಿ ಧನ್ಯವಾದ. ಈ ವಿಜಯ ಜನರಿಗೆ ಸೇರಿದ ವಿಜಯವಾಗಿದೆ. ರಾಜ್ಯ ಸರ್ಕಾರ ಜನರ ಭಾವನೆಗೆ ಸ್ಪಂದಿಸಿದೆ ಎಂಬುದಕ್ಕೆ ಈ ವಿಜಯವೇ ಸಾಕ್ಷಿ. ಅನಿರೀಕ್ಷಿತ ಪ್ರವಾಹ ಮತ್ತು ಕೊರೊನಾ ಸಮಯದಲ್ಲೂ ರಾಜ್ಯ ಸರ್ಕಾರ ಉತ್ತಮ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು.
ಎರಡು ಕ್ಷೇತ್ರದ ಜನತೆಗೆ ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯನ್ನು ನಾನು ಈಡೇರಿಸುತ್ತೇನೆ. ಇದರ ಜೊತೆಗೆ ಬಿಹಾರದಲ್ಲೂ ಕೂಡ ನಮ್ಮ ಪಕ್ಷ ಗೆದ್ದಿದೆ. ಇದಕ್ಕೆ ನರೇಂದ್ರ ಮೋದಿಯವರು ಮತ್ತು ನಿತೀಶ್ ಕುಮಾರ್ ಕಾರಣ. ಪ್ರಧಾನಿ ಮೋದಿಯವರ ಪರಿಶ್ರಮದಿಂದ ಬಿಹಾರದಲ್ಲಿ ನಿರೀಕ್ಷೆ ಮಾಡಿರದ ಗೆಲುವನ್ನು ಸಾಧಿಸಿದ್ದೇವೆ. ಮಧ್ಯ ಪ್ರದೇಶದಲ್ಲಿ 19 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಜೊತೆಗೆ ಗುಜರಾತಿನಲ್ಲಿ ಎಂಟಕ್ಕೆ ಎಂಟು ಕ್ಷೇತ್ರದಲ್ಲಿ ಗೆದ್ದಿದ್ದೇವೆ ಎಂದು ತಿಳಿಸಿದರು.
ಆರ್.ಆರ್ ನಗರದ ಗೆಲುವು ಅತ್ಯಂತ ದೊಡ್ಡ ಗೆಲುವಾಗಿದೆ. ಶಿರಾದಲ್ಲೂ ಕೂಡ 15 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ನಮ್ಮ ಸರ್ಕಾರ ಜನಪರ ಸರ್ಕಾರ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ನನ್ನ ಅವಧಿಯಲ್ಲಿ ಯಾವ ಯಾವ ಕೆಲಸ ಕಾರ್ಯಗಳು ನಡೆಯಬೇಕು ಅದನ್ನು ಪೂರ್ಣ ಮಾಡುತ್ತೇನೆ. ಮುಂದಿನ ದಿನದಲ್ಲಿ ಪಕ್ಷದ ವರಿಷ್ಠರ ಜೊತೆ ಮಾತನಾಡಿ ಸಂಪುಟ ವಿಸ್ತರಣೆಯನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿ, ಮಾತಾಡೋದೇ ಸಾಧನೆ ಆಗಬಾರದು, ಸಾಧನೆ ಮಾತನಾಡಬೇಕು. ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಬಹಳ ಮಾತನಾಡಿದರು. ಅವರ ಮಾತುಗಳಿಗೆ ಮತದಾರರೇ ಉತ್ತರ ನೀಡಿದ್ದಾರೆ. ಹೀಗಾಗಿ ನಾನು ಉತ್ತರ ಕೊಡಬೇಕಿಲ್ಲ. ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಅವರೇ ತಮ್ಮ ತಪ್ಪುಗಳನ್ನು ತಿಳಿದುಕೊಂಡು ಇನ್ನೂ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದರು.
ಮುಂದೆ ಬರುವ ಬಸವ ಕಲ್ಯಾಣ, ಮಸ್ಕಿ ವಿಧಾನಸಭಾ ಉಪಚುನಾವಣೆ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಈ ಬಾರೀ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಮಾಡುವುದಿಲ್ಲ. ರಾಷ್ಟ್ರ ನಾಯಕ ಅಪೇಕ್ಷೆ ಮೇರೆಗೆ ಮುಂದಿನ ಚುನಾವಣೆಯಲ್ಲಿ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.
